ಜೀವನದಲ್ಲಿ ಅಮಿಷಗಳಿಗೆ ಬಲಿಯಾಗದಂತೆ ನಮ್ಮನ್ನು ನಾವು ಕಾಪಾಡಲು ಹೆಚ್ಚು ಕ್ರಿಯಾಶೀಲವಾಗಿ ಆಲೋಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.
ಅಕ್ಕ ಪ್ರಕಾಶನ ಆಯೋಜಿಸಿದ್ದ ತೆಂಬರೆಯ ತರಂಗ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಾ, ಸಮಾಜದಲ್ಲಿ ಧ್ವನಿ ಇಲ್ಲದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳು, ಪ್ರಗತಿಪರ ಲೇಖಕರು ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಜನರು ಹೆಚ್ಚು ರಚನಾತ್ಮಕ ಕ್ರಿಯೆಗಳಲ್ಲಿ ತೊಡಗಬೇಕು ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಡಾ. ಬಿ.ಎ. ವಿವೇಕ ರೈ, ಸಾಹಿತ್ಯಕ್ಕಿಂತ ರಾಜಕೀಯ ಮತ್ತು ಆಡಳಿತ ವೇಗವಾಗಿ ಚಲಿಸುತ್ತಿದೆ. ಮೊಯ್ಲಿ ತಮ್ಮ ಕೃತಿಗಳ ಮೂಲಕ ಕ್ರಿಯಾತ್ಮಕ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಸಿ.ಎನ್. ರಾಮಚಂದ್ರನ್, ಸಾಹಿತಿ ಡಾ. ಚಂದ್ರಶೇಖರ್ ಕಂಬಾರ, ಡಾ. ಸಿ.ಆರ್. ಗೋವಿಂದರಾಜ್, ಮಾಲತಿ ಮೊಯಿಲಿ, ಡಾ. ಹಿ.ಚಿ. ಬೋರಲಿಂಗಯ್ಯ ಮೊದಲಾದ ಹಲವು ಗಣ್ಯರು ಭಾಗವಹಿಸಿದ್ದರು. ಈ ಸಂಕಲನದಲ್ಲಿ ಮೊಯಿಲಿಯವರ ಶ್ರೀ ರಾಮಾಯಣ ಅನ್ವೇಷಣಂ ಸೇರಿದಂತೆ ಒಟ್ಟು 26 ಲೇಖನಗಳಿವೆ.
|