ರಾಜ್ಯ ಕಾಂಗ್ರೆಸ್ಸಿಗರ ತಾಳಕ್ಕೆ ರಾಜ್ಯಪಾಲರು ನೃತ್ಯ ಮಾಡುತ್ತಿದ್ದಾರೆ. ಅವರು ನಿಷ್ಪಕ್ಷಪಾತವಾಗಿ ಆಡಳಿತ ನಡೆಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯಪಾಲರ ಅಕ್ಕಪಕ್ಕದಲ್ಲಿ ಕೂತ ಕಾಂಗ್ರೆಸ್ಸಿಗರು ಅವರ ಕಿವಿ ಊದುತ್ತಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಯೋಜಿಸಲಾಗಿದ್ದ ಜನಪರ ಕಾರ್ಯಕ್ರಮಗಳು ಜಾರಿಗೆ ಬರಬಾರದು ಎಂಬುದು ಇವರ ಷಡ್ಯಂತ್ರ ಎಂದು ಆರೋಪಿಸಿದರು.
ತಮ್ಮ ಅಧಿಕಾರಾವಧಿಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿತ್ತು. ಆದರೆ ಉನ್ನತ ಸಮಿತಿ ಈ ಕಾಮಗಾರಿಗೆ ಕೊಕ್ಕೆ ಹಾಕಲಾಗಿದೆ. ಉತ್ತಮ ಕೆಲಸಗಾರರಿಗೆ ಗುತ್ತಿಗೆ ವಹಿಸಿ ಕಾಮಗಾರಿ ಶುರುಮಾಡಲು ತೊಂದರೆ ಏನು ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಇದರೊಂದಿಗೆ ತಮ್ಮ ಅಧಿಕಾರಾವಧಿಯ ಯೋಜನೆಗಳಾದ, ಡಾ.ನಂಜುಂಡಪ್ಪ ವರದಿ ಜಾರಿ, ಸುರಕ್ಷಾ, ಸೈಕಲ್ ವಿತರಣೆ ಯೋಜನೆಗಳು ಸಮಯಕ್ಕೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಯಡಿಯೂರಪ್ಪ ಆಪಾದಿಸಿದ್ದಾರೆ.
|