ದೇವಾಲಯಕ್ಕೆ ಬರುವ ಮಹಿಳೆಯರ ಅಸಹಾಯಕತೆ ಬಳಸಿಕೊಂಡು ಆಭರಣ ದೋಚಿ ಕೊಲೆಗೈಯುತ್ತಿದ್ದ ಮಹಿಳೆಯೊಬ್ಬಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರು ಹೊರವಲಯದ ಕಗ್ಗಲಿಪುರ ಹೋಬಳಿಯ ಬಾದಕಟ್ಟಿ ಗ್ರಾಮದ ಮಲ್ಲಿಕಾ ಎಂಬ 43ವರ್ಷದ ಈ ಮಹಿಳೆ ಈಗ ಪೊಲೀಸರ ಅತಿಥಿ.
ದೇವಾಲಯಕ್ಕೆ ಬರುವ ಮಹಿಳೆಯರನ್ನು ಮಂಡಲ ಪೂಜೆ ಮಾಡಿಸುವುದಾಗಿ ನಂಬಿಸಿ ಬೇರೊಂದು ಐತಿಹಾಸಿಕ ದೇವಾಲಯಕ್ಕೆ ಕರೆದೊಯ್ದು ಪೂಜೆ ಮಾಡುವಂತೆ ಹೇಳುತ್ತಿದ್ದಳು. ನಂತರ ಅವರು ಕಣ್ಣು ಮುಚ್ಚಿ ಪ್ರಾರ್ಥಿಸುವಾಗ ಅವರಿಗೆ ಸೈನೈಡ್ ನುಂಗಿಸಿ ಕೊಲೆ ಮಾಡಿ ಒಡವೆ ದೋಚಿ ಪರಾರಿಯಾಗುತ್ತಿದ್ದ ಈಕೆ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದಳು.
ಇದೇ ತಂತ್ರ ಬಳಸಿ ಈಕೆ ಈಗಾಗಲೇ ಆರು ಕೊಲೆಗಳನ್ನು ಮಾಡಿದ್ದು ಬೆಂಗಳೂರಿನ ವಿವಿಧೆಡೆ ಈ ಹಿಂದೆ ಮನೆಗೆಲಸ ಮಾಡುತ್ತಿದ್ದಾಗ ಅಲ್ಲಿ ಕದ್ದ ಚಿನ್ನ, ಮೊಬೈಲ್ ಇನ್ನಿತರ ವಸ್ತುಗಳನ್ನು ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುವಾಗ ಸಿಕ್ಕಿಬಿದ್ದಳು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ತನ್ನೆಲ್ಲಾ ಕೃತ್ಯಗಳನ್ನೂ ಬಾಯಿಬಿಟ್ಟಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|