ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೆಚ್ಚಿಸಿರುವ ಅಭಿವೃದ್ದಿ ಶುಲ್ಕವನ್ನು ಶೀಘ್ರವೇ ಕೈ ಬಿಡಬೇಕೆಂದು ಕಾಂಗ್ರೆಸ್ ಘಟಕ ಪಾಲಿಕೆಯನ್ನು ಒತ್ತಾಯಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವರುಗಳಾದ ವಿ. ಸೋಮಣ್ಣ ಮತ್ತು ರಾಮಲಿಂಗಾರೆಡ್ಡಿಯವರು, ಜನರ ಹಿತವನ್ನು ಮರೆತು ಅಧಿಕಾರಿಗಳು ಶುಲ್ಕ ಸೇರಿದಂತೆ ಇನ್ನಿತರ ಶುಲ್ಕವನ್ನು ಏರಿಕೆ ಮಾಡಿದ್ದಾರೆ. ಅದನ್ನು ಕೈ ಬಿಡದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಹೇಳಿದರು.
ಚುನಾಯಿತ ಪ್ರತಿನಿಧಿಗಳಿಲ್ಲದ ಸಂದರ್ಭದಲ್ಲಿ ನಗರಪಾಲಿಕೆ ಇಂತಹ ತೀರ್ಮಾನವನ್ನು ಕೈಗೊಳ್ಳುವಂತಿಲ್ಲ. ಪಾಲಿಕೆ ಈ ವಿಷಯದಲ್ಲಿ ತುಘಲಕ್ ದರ್ಬಾರು ನಡೆಸಿದೆ. ಪಾಲಿಕೆ ಕೈಗೊಂಡಿರುವ ವಿವೇಚನಾರಹಿತ ತೀರ್ಮಾನವನ್ನು ತಡೆಗಟ್ಟಲು ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎಸ್.ಟಿ. ಸೋಮಶೇಖರ್, ದಿನೇಶ್ ಗುಂಡೂರಾವ್, ಟಿ.ಆರ್. ರಮೇಶ್ ಮತ್ತಿತರು ಉಪಸ್ಥಿತರಿದ್ದರು.
|