ಪುತ್ತಿಗೆ ಶ್ರೀಗಳ ಪರ್ಯಾಯ ಮತ್ತು ಶ್ರೀಕೃಷ್ಣ ಪೂಜೆಗೆ ಸಂಬಂಧಿಸಿದ ವಿವಾದ ಇನ್ನೂ ಇತ್ಯರ್ಥವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದರ ಕುರಿತಾದ ಚರ್ಚೆಗೆಂದೇ ಆಯೋಜಿಸಲಾಗಿದ್ದ ಸಂಧಾನ ಸಭೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳದಿರುವುದು ಈ ಮಾತಿಗೆ ಪುಷ್ಟಿ ನೀಡಿದೆ.
ಈ ಸಭೆಯಲ್ಲಿ ನಿರ್ಧಾರ ತಳೆಯಬೇಕಿದ್ದ ಪೇಜಾವರ ಶ್ರೀಗಳು ಸ್ಪಷ್ಟ ಅಭಿಪ್ರಾಯ ತಿಳಿಸದೆ ದೆಹಲಿಗೆ ತೆರಳಿದ್ದಾರೆ. ಅವರು ವಾಪಸ್ ಬಂದ ಬಳಿಕವೇ ಅಂತಿಮ ನಿರ್ಧಾರ ಹೊರಬೀಳಬೇಕಿದೆ ಎಂದು ಮಠದ ಮೂಲಗಳು ತಿಳಿಸಿದ್ದು, ಮುಂಬೈನ ಉದ್ಯಮಿಯೋರ್ವರ ಸಮ್ಮುಖದಲ್ಲಿ ವಿವಾದ ಬಗೆಹರಿಯಲಿದೆ ಎಂಬ ವದಂತಿಯನ್ನು ಅವು ತಳ್ಳಿಹಾಕಿವೆ.
ಪುತ್ತಿಗೆ ಪರ್ಯಾಯಕ್ಕೆ ಬೆಂಬಲ ಕೋರಿ ಭಕ್ತ ಕೋಟಿ ಭಾವ ಸಂಗ್ರಹ ಎಂಬ ಯೋಜನೆಯೊಂದನ್ನು ಈಗಾಗಲೇ ಜಾರಿಗೆ ತರಲಾಗಿದೆ. ಕೃಷ್ಣಪೂಜೆಯ ಕುರಿತಾದ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಪುತ್ತಿಗೆ ಶ್ರೀಗಳ ಸ್ಪಷ್ಟನೆಯ ಹಿನ್ನೆಲೆಯಲ್ಲಿ ಅವರ ಪರ - ವಿರೋಧ ನಿಲುವುಗಳನ್ನು ಹೊಂದಿರುವ ಸಂಘಟನೆಗಳು ಉಡುಪಿಗೆ ಆಗಮಿಸಿ ಆತಂಕಕಾರಿ ಸನ್ನಿವೇಶ ನಿರ್ಮಾಣವಾಗಬಹುದು ಎಂಬ ವದಂತಿಯೂ ಉಡುಪಿಯಲ್ಲಿ ಹಬ್ಬುತ್ತಿದೆ.
ವಿದೇಶ ಪ್ರವಾಸ ಮಾಡಿರುವ ಯತಿಗಳು ಕೃಷ್ಣಪೂಜೆಗೆ ಅರ್ಹರೇ? ಎಂಬ ವಿಷಯದ ಕುರಿತು ಪುತ್ತಿಗೆ ಮಠಾಧೀಶರು ಹಾಗೂ ಪೇಜಾವರ ಮಠಾಧೀಶರಿಗೆ ಗುರುಗಳಾಗಿದ್ದ ವಿದ್ಯಾಮಾನ್ಯ ತೀರ್ಥರು 1997ರಲ್ಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಅವರ ಆ ಲಿಖಿತ ಅಭಿಪ್ರಾಯ ಹಾಗೂ ಉತ್ತರಾದಿಮಠದ ಸತ್ಯಾತ್ಮತೀರ್ಥರ ಈಚಿನ ಪತ್ರಗಳನ್ನು ಬಹಿರಂಗಗೊಳಿಸುವ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
|