ಈವರೆಗೆ ನನಗೆ ದೊರೆತ ಎಲ್ಲ ಪ್ರಶಸ್ತಿಗಳಿಗಿಂತ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಮಿಗಿಲಾಗಿದೆ. ಇದನ್ನು ಕನ್ನಡಾಂಬೆಯ ಪಾದಗಳಿಗೆ ಅರ್ಪಿಸುವೆ ಎಂದು ಖ್ಯಾತ ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್ ತಿಳಿಸಿದ್ದಾರೆ.
ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಹೊಸ ತಲೆಮಾರಿನ ಬರಹಗಾರರು ತಮ್ಮ ಬರಹದಲ್ಲಿನ ವಾಕ್ಯರಚನೆಯ ದೋಷವನ್ನು ಸರಿಪಡಿಸಿಕೊಂಡು ನಿರ್ಭೀತಿಯಿಂದ, ನಿಷ್ಪಕ್ಷಪಾತವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಉದ್ಯಮಿ ಯಜ್ಞನಾರಾಯಣ ಕಮ್ಮಾಜೆಯವರು ಮಾತನಾಡುತ್ತಾ ಪ್ರೆಸ್ ಕ್ಲಬ್ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ನಿಧಿ ಸ್ಥಾಪಿಸಿದರೆ ತಾವು ನೆರವು ನೀಡಲು ಸಿದ್ಧ. ಅವಕಾಶವಾದರೆ ವರ್ಷಕ್ಕೆ ಒಬ್ಬ ಅರ್ಹ ವಿದ್ಯಾರ್ಥಿಯ ವೃತ್ತಿಪರ ಕೋರ್ಸ್ ವೆಚ್ಚ ಭರಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಕೆ.ಶ್ರೀಧರ ಆಚಾರ್ ಹಾಗೂ ಹಿರಿಯ ಛಾಯಾಚಿತ್ರಕಾರ ಡಿ.ಬಾಬುರಾಜ್ ಅವರಿಗೆ ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಲನಚಿತ್ರ ಕಲಾವಿದರಾದ ಚೇತನ್ ಹಾಗೂ ರಮ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
|