ಲಿಂಗಸಗೂರಿನಲ್ಲಿ ನಾಳೆ ನಡೆಯಲಿರುವ ರೈತ ಸಮಾವೇಶಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಲಿಂಗಸಗೂರು ತಾಲ್ಲೂಕಿನಾದ್ಯಂತ ಕಟೌಟ್‌ಗಳ ಮೇಳವೇ ತುಂಬಿದೆ. ಎಲ್ಲೆಲ್ಲಿ ನೋಡಿದರೂ ಬ್ಯಾನರ್‌ಗಳು, ಪಕ್ಷದ ಬಾವುಟಗಳು ಹಾರಾಡುತಿದ್ದು ಇಡೀ ಜಿಲ್ಲೆಯನ್ನೇ ಕೇಸರಿಮಯವನ್ನಾಗಿಸಿದೆ.
ಸಮಾವೇಶದಲ್ಲಿ ರಾಯಚೂರು, ಕೊಪ್ಪಳ, ಬೀದರ್, ಗದಗ್ ಜಿಲ್ಲೆಯ ರೈತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ದಕ್ಷಿಣ ಭಾಗದಲ್ಲೇ ಪ್ರಪ್ರಥಮವಾದ ಬೃಹತ್ ರೈತ ಸಮಾವೇಶಕ್ಕೆ ಬಿಜೆಪಿ ರಾಷ್ಟ್ತ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಮತ್ತು ಗುಜರಾತ್ ಚುನಾವಣಾ ಪ್ರಚಾರದ ರೂವಾರಿ ಓ.ಪಿ. ಓಡಾ ಅವರು ಸಹ ಆಗಮಿಸಲಿದ್ದಾರೆ.
ಈ ನಡುವೆ ಬಿಜೆಪಿ ವತಿಯಿಂದ ನಡೆಯಲಿರುವ ರೈತ ಸಮಾವೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಮಾವೇಶದ ಭರದ ಸಿದ್ಧತೆಯಿಂದ ತಲ್ಲಣಗೊಂಡಿರುವ ಕಾಂಗ್ರೆಸ್, ಜೆಡಿ(ಎಸ್) ಪ್ರತಿನಿಧಿಗಳು ಸಭೆಯ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ರೈತ ಪ್ರತಿನಿಧಿ ಅಮರಣ್ಣ ಗುಂಡೀಹಾಳರವರು ಬಿಜೆಪಿಯ ರೈತರ ಸಮಾವೇಶ ಒಂದು ನಾಟಕ ಎಂದು ಜರಿದಿದ್ದಾರೆ. ರೈತರ ಬಗ್ಗೆ ಕಾಳಜಿ ಇರುವ ಬಿಜೆಪಿ ನಾಯಕರು ತಮ್ಮ ಆಳ್ವಿಕೆಯ ಕಾಲದಲ್ಲೇಕೆ ರೈತರ ಸಮಸ್ಯೆಗೆ ಧ್ವನಿಗೂಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರೈತ ಮೋರ್ಚಾದ ಈಶ್ವರಚಂದ್ರ ಹೊಸಮನಿಯವರು ಮಾತನಾಡಿ ರೈತ ಸಮುದಾಯಕ್ಕೆ ಬಿಜೆಪಿ ನೀಡಿರುವ ಕೊಡುಗೆ ಅಪಾರ. ಕಾಮಾಲೆ ಕಣ್ಣಿನಿಂದ ನಮ್ಮ ಸಾಧನೆಗಳನ್ನು ನೋಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.
ಸಮಾವೇಶಕ್ಕಾಗಿ ಇಷ್ಟೆಲ್ಲಾ ಭರದ ಸಿದ್ಧತೆ ನಡೆದಿದ್ದರೂ ಅನಂತಕುಮಾರ್ ಬಣದ ಅನುಪಸ್ಥಿತಿ ಸ್ಥಳೀಯ ಬಿಜೆಪಿ ನಾಯಕರ ಗೊಂದಲಕ್ಕೆ ತೆರೆದ ಕನ್ನಡಿಯಾಗಿದೆ.
|