ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿರುವುದರಿಂದ ವಿಧಾನ ಮಂಡಲದ ಎಲ್ಲಾ ಅಧಿಕಾರಿಗಳೂ ಅಮಾನತುಗೊಂಡಿರುತ್ತಾರೆ. ಆದ್ದರಿಂದ ವಿಧಾನಪರಿಷತ್ ಅಧಿವೇಶನವನ್ನು ಕರೆಯುವಂತಿಲ್ಲ ಎಂದು ಮಾಜಿ ಕಾನೂನು ಸಚಿವ ಎಂ.ನಾಣಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸಂವಿಧಾನದ 356ನೇ ಕಲಂ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿರುವ ಆದೇಶದಲ್ಲಿ ಈ ಅಂಶವನ್ನು ನೀಡಲಾಗಿದೆ. ವಿಧಾನಮಂಡಲದ ಅಧಿವೇಶನವನ್ನು ಕರೆಯುವ ರಾಜ್ಯಪಾಲರ ಅಧಿಕಾರ ಅಮಾನತಾಗಿರುವುದರಿಂದ ಅವರು ಅಧಿವೇಶನ ಕರೆಯುವಂತಿಲ್ಲ ಎಂದು ತಿಳಿಸಿದರು.
ಈ ಹಿಂದೆ ಯಾವ ರಾಜ್ಯದಲ್ಲೂ ವಿಧಾನಸಭೆ ವಿಸರ್ಜನೆಯಾಗಿ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದಾಗ ವಿಧಾನ ಪರಿಷತ್ ಅಧಿವೇಶನ ನಡೆಸಿದ ಉದಾಹರಣೆಗಳಿಲ್ಲ. ರಾಜ್ಯಾಂಗದ ಅಡಿಯಲ್ಲಿ ಅಧಿವೇಶನ ನಡೆಸುವಂತೆಯೂ ಇಲ್ಲ ಎಂದು ನಾಣಯ್ಯ ನುಡಿದರು.
ಸರ್ಕಾರ ನಡೆಸುವ ಆಡಳಿತ ಪಕ್ಷವೇ ಇಲ್ಲದ ಸಂದರ್ಭದಲ್ಲಿ ವಿರೋಧಪಕ್ಷಕ್ಕೆ ಸ್ಥಾನ ಇಲ್ಲ. ಈ ಕಾರಣದಿಂದಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಸ್ಥಾನ ಕೂಡ ಈಗ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ನಾಣಯ್ಯ ಅಭಿಪ್ರಾಯಪಟ್ಟರು.
|