ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷವು ಭಾರೀ ಸೋಲನುಭವಿಸಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ಎರಡು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ವಾಸ್ತವವಾಗಿ, ಕಾನೂನು ಮತ್ತು ಸುವ್ಯವಸ್ಥೆ, ಪ್ರವಾಹ ಸಂತ್ರಸ್ತ ಪ್ರದೇಶಗಳಲ್ಲಿನ ಪರಿಹಾರ ಕಾರ್ಯಗಳ ಪ್ರಗತಿ ಇವೇ ಮೊದಲಾದ ವಿಷಯಗಳ ಕುರಿತು ರಾಜ್ಯಪಾಲರೊಂದಿಗೆ ಚರ್ಚಿಸಲು ಅವರು ಬರುತ್ತಿರುವರಾದರೂ ಅವರ ಭೇಟಿಯ ಉದ್ದೇಶ ಮತ್ತೇನೋ ಇದೆ ಎಂಬ ಸುದ್ದಿಗಳು ಹಬ್ಬಿವೆ.
ಎರಡು ರಾಜ್ಯಗಳಲ್ಲಿ ಕಾಂಗ್ರೆಸಿಗೆ ಸೋಲಾಗಿದ್ದು, ಬಿಜೆಪಿ ವಿಜಯ ಗಳಿಸಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಚುನಾವಣೆ ನಡೆಸಲು ಇದು ಸಕಾಲವಲ್ಲ. ಹಾಗಾಗಿ ರಾಜ್ಯದಲ್ಲಿ ಈಗ ಜಾರಿಯಲ್ಲಿರುವ ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆಯಾಗುತ್ತದೆ ಹಾಗೂ ವಿಧಾನಸಭಾ ಚುನಾವಣೆಗಳು ಮುಂದೂಡಲ್ಪಡುತ್ತವೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿರುವ ಸಂದರ್ಭದಲ್ಲಿಯೇ ಶಿವರಾಜ್ ಪಾಟೀಲ್ ಭೇಟಿ ನೀಡಿರುವುದು ಈ ಬಗೆಯ ಸುದ್ದಿ ಹಬ್ಬಲು ಕಾರಣವಾಗಿದೆ.
ಚುನಾವಣೆಗೆ ಈಗ ಪರಿಸ್ಥಿತಿ ಪಕ್ವವಾಗಿದೆಯೇ? ಒಂದು ಪಕ್ಷ ಮೇ ತಿಂಗಳಲ್ಲಿ ಚುನಾವಣೆ ನಡೆಸಿದರೆ ಪಕ್ಷಕ್ಕೆ ಲಾಭವಾಗುವುದೇ? ಎಂಬ ಮಾಹಿತಿಗಳನ್ನು ಸಂಗ್ರಹಿಸಲು ಪಾಟೀಲ್ ನಗರಕ್ಕೆ ಬಂದಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ ಅದು ಅನುಕೂಲಕರವಾಗಿ ಪರಿಣಮಿಸುತ್ತದೆ. ಇದನ್ನು ತಪ್ಪಿಸಲು ಚುನಾವಣೆ ಮುಂದೂಡಬೇಕು ಎಂದು ಈ ಹಿಂದೆಯೇ ರಾಜ್ಯ ಕಾಂಗ್ರೆಸ್ಸಿಗರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದಾಗಿದೆ.
|