ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲ್ಲೂಕುಗಳ ಎಲ್ಲಾ ಗ್ರಾಮಗಳನ್ನು ಸಂಪೂರ್ಣ ಮಾಧ್ಯಮಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಮಾಧ್ಯಮಗ್ರಾಮ ಯೋಜನೆಯ ಪ್ರವರ್ತಕ ಡಾ.ಯು.ಪಿ.ಶಿವಾನಂದ ಪ್ರಕಟಿಸಿದ್ದಾರೆ.
ಮಂಗಳವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರ ಪ್ರದೇಶಗಳಲ್ಲಿ ಸುದ್ದಿಜಾಲಗಳಿಗೆ ಕೊರತೆಯಿರುವುದಿಲ್ಲ. ಆದರೆ ಗ್ರಾಮೀಣ ಪ್ರದೇಶದ ಜನರಿಗೆ ಟಿವಿ-ಮೊಬೈಲ್ ಇವೇ ಮೊದಲಾದ ಸೌಕರ್ಯದ ಲಭ್ಯತೆಯೂ ಕಡಿಮೆಯೇ ಎನ್ನಬೇಕು. ಇಂಥ ಸನ್ನಿವೇಶದಲ್ಲಿ ತಾಲ್ಲೂಕು ಮಟ್ಟದ ಪತ್ರಿಕೆಗಳು ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳ ಸಂಪರ್ಕ ಸೇತುವಿನ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ಮನೆಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಪುತ್ತೂರು ತಾಲೂಕಿನ ಬಲ್ನಾಡು ಹಾಗೂ ಸವಣೂರು, ಸುಳ್ಯ ತಾಲೂಕಿನ ಬೆಳ್ಳಾರೆ, ಮಡಪ್ಪಾಡಿ, ಮಂಡೆಕೋಲು, ಬೆಳ್ತಂಗಡಿ ತಾಲೂಕಿನ ಮುಂಡೂರು, ಪುದುವೆಟ್ಟು, ಅರಸಿನಮಕ್ಕಿ, ಪುತ್ತಿಲ, ಮುಂಡಾಜೆ, ಹತ್ಯಡ್ಕ, ಮೊಗ್ರು, ಕೊಡಗು ಜಿಲ್ಲೆಯ ಚೆಂಬು ಸೇರಿದಂತೆ 13 ಗ್ರಾಮಗಳನ್ನು ಮಾಧ್ಯಮಗ್ರಾಮಗಳನ್ನಾಗಿ ರೂಪಿಸಲಾಗಿದೆ. ಇದರೊಂದಿಗೆ ಪುತ್ತುರು ಪುರಸಬೆಯ 2 ವಾಡ್ ರ್ ಬೆಳ್ತಂಗಡಿ ನಗರ ಸಭೆಯ 2 ಮತ್ತು ಸುಳ್ಯ ನಗರದ 2 ವಾರ್ಡ್‌ಗಳನ್ನು ಮಾಧ್ಯ,ಮ ನಗರಗಳನ್ನಾಗಿ ರೂಪಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಉಳಿದೆಲ್ಲ ಗ್ರಾಮಗಳಿಗೆ ಮಾಧ್ಯಮಗ್ರಾಮ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ಮಾಧ್ಯಮಗಳು - ಮುದ್ರಣ ಮಾಧ್ಯಮವೇ ಆಗಲಿ ಅಥವಾ ವಿದ್ಯುನ್ಮಾನ ಮಾಧ್ಯಮವೇ ಆಗಲಿ - ಜನರನ್ನು ತಲುಪುವಲ್ಲಿ ಪ್ರಧಾನಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಒಂದು ಗ್ರಾಮವನ್ನು ಸಂಪೂರ್ಣ ಮಾಧ್ಯಮ ಗ್ರಾಮವನ್ನಾಗಿಸಿದರೆ ಅದು ಮಾಹಿತಿಯ ಕಣಜವೇ ಆಗುತ್ತದೆ ಎಂದ ಡಾ| ಶಿವಾನಂದರವರು, ಮಾಹಿತಿಯ ಕೊರತೆಯಿಂದ ಬಳಲುತ್ತಿರುವವರಿಗೆ ಮಾಹಿತಿಯ ಮಹಾಪೂರವೇ ಹರಿದುಬಂದಾಗ ಅದು ಅವರ ದೈನಂದಿನ ಜೀವನದ ಜೀವಸೆಲೆಯಾಗುತ್ತದೆ. ಮಾಧ್ಯಮಗಳ ಮುಖಾಂತರ ಹಳ್ಳಿಗರಲ್ಲಿ ಅರಿವು, ಚುರುಕುತನ ಮೂಡಿಸಿದರೆ ಅದು ಅಕ್ಷರ ಕ್ರಾಂತಿಗೆ ನಾಂದಿ ಹಾಡಿದಂತಾಗುತ್ತದೆ ಎಂದು ನುಡಿದರು.
ಇದೇ ಮಾಧ್ಯಮ ಗ್ರಾಮ ಯೋಜನೆಯ ಮೂಲ ಆಶಯ. ಆಯಾ ತಾಲ್ಲೂಕಿನ, ಗ್ರಾಮದ ರಸ್ತೆ, ವಿದ್ಯುದ್ದೀಪ-ನೀರಿನ ಸೌಕರ್ಯ, ದಿನನಿತ್ಯದ ಕಾರ್ಯಕ್ರಮಗಳು, ಮಾರಾಟ-ಖರೀದಿ, ಶಿಕ್ಷಣ, ಉದ್ಯೌಗ, ಆರೋಗ್ಯ ಮಾಹಿತಿ, ಕುಂದುಕೊರತೆಗಳೂ ಸೇರಿದಂತೆ ಲಭ್ಯವಿರುವ ಇಲಾಖೆಗಳ ಸಮಗ್ರ ಮಾಹಿತಿ ಆಯಾ ಗ್ರಾಮಗಳ ಮಾಹಿತಿ ಕೇಂದ್ರಗಳಲ್ಲಿ ಲಭ್ಯ. ಆಯಾ ಗ್ರಾಮಗಳ ವಿವಿಧ ವೃತ್ತಿಪರರು, ವಿವಿಧ ವಿಷಯಗಳ ಕುರಿತಾದ ಮಾಹಿತಿಯನ್ನು ಈ ಕೇಂದ್ರಗಳಿಂದ ಉಚಿತವಾಗಿ ಪಡೆಯಬಹುದು ಎಂದು ಡಾ| ಶಿವಾನಂದ ತಿಳಿಸಿದರು..
ಪುತ್ತೂರು ತಾಲ್ಲೂಕಿನ 68 ಗ್ರಾಮಗಳು, ಸುಳ್ಯ ತಾಲ್ಲೂಕಿನ 41 ಗ್ರಾಮಗಳು ಹಾಗೂ ಬೆಳ್ತಂಗಡಿ ತಾಲ್ಲೂಕಿನ 80 ಗ್ರಾಮಗಳನ್ನು ತನ್ನದೇ ಸುದ್ದಿಮಾಹಿತಿ ಟ್ರಸ್ಟ್ ಅಡಿಯಲ್ಲಿ ತಂದು, ಇವುಗಳನ್ನು ಮಾಧ್ಯಮ ಗ್ರಾಮಗಳನ್ನಾಗಿ ರೂಪಿಸುವ ದೃಷ್ಟಿಯಿಂದ ಸುದ್ದಿ ಮಾಹಿತಿ ಕೇಂದ್ರಗಳನ್ನು ಈಗಾಗಲೇ ಸಂಸ್ಥೆಯು ಸ್ಥಾಪಿಸಿದೆ. ಜತೆಗೆ 11 ಗ್ರಾಮಗಳನ್ನು ಮಾಹಿತಿ ಮಾಧ್ಯಮ ಗ್ರಾಮಗಳನ್ನಾಗಿ ರೂಪಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಡಾ.ಶಿವಾನಂದ ತಿಳಿಸಿದರು.
ಕನ್ನಡದ ಮೊತ್ತಮೊದಲ ಪತ್ರಿಕೆ (ಮಂಗಳೂರು ಸಮಾಚಾರ) ಹುಟ್ಟಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಇತರ ದಿನಾಚರಣೆಗಳಂತೆ ಪತ್ರಿಕಾ ದಿನಾಚರಣೆಯನ್ನೂ ತಾಲ್ಲೂಕು-ಗ್ರಾಮ ಮಟ್ಟಗಳಲ್ಲಿ ಆಯೋಜಿಸುವುದು ಮುಂದಿನ ಯೋಜನೆಗಳಲ್ಲಿ ಮುಖ್ಯವಾದುದು ಎಂದು ಇದೇ ಸಂದರ್ಭದಲ್ಲಿ ಡಾ| ಶಿವಾನಂದ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುದ್ದಿ ಸಮೂಹ ಸಂಸ್ಥೆಯ ಬೆಂಗಳೂರು ಮುಖ್ಯಸ್ಥ ಲಕ್ಷ್ಮೀಶ ಕಾಟುಕುಕ್ಕೆ, ನ್ಯೂಸ್ರೂಮ್ ಇವೆಂಟ್ ಹಾಗೂ ಸುದ್ದಿಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿಶಂಕರ ಬೆಟ್ಟಂಪಾಡಿ ಉಪಸ್ಥಿತರಿದ್ದರು.
|