ಉಡುಪಿಯ ಪರ್ಯಾಯ ಕುರಿತ ವಿವಾದಕ್ಕೆ ತಮ್ಮನ್ನು ಕಾರಣಕರ್ತರನ್ನಾಗಿಸಿರುವ ಪುತ್ತಿಗೆ ಶ್ರೀಗಳ ಆರೋಪ ಸತ್ಯಕ್ಕೆ ದೂರ ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಸುದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕೃಷ್ಣಪೂಜೆಯ ನಿಯಮಗಳನ್ನು ಸಡಿಲಿಸಿದರೆ ಮುಂದೆ ಡಾಲರ್ ವ್ಯಾಮೋಹ ಮತ್ತು ಇತರ ಆಕರ್ಷಣೆಗಳಿಂದ ವಿದೇಶಕ್ಕೆ ಹೋಗುವಂತಾಗಿ ಪಾವಿತ್ರ್ಯಕ್ಕೆ ಭಂಗವಾಗುತ್ತದೆ. ಈ ದೃಷ್ಟಿಯಿಂದ ನಿಯಮವನ್ನು ಉಳಿಸಲು ತಾವು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
ಕೃಷ್ಣಮಠದ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ಅಷ್ಟ ಮಠಾಧೀಶರೂ ಹಸ್ತಕ್ಷೇಪ ಮಾಡಲು ಅವಕಾಶವಿದೆ. ಯಾವುದೇ ಭಿನ್ನಾಭಿಪ್ರಾಯ ಉಂಟಾದಾಗ ಬಹುಮತದ ನಿರ್ಣಯಕ್ಕೆ ಎಲ್ಲರೂ ತಲೆಬಾಗಬೇಕಾಗುತ್ತದೆ ಎಂದು ನುಡಿದ ಪೇಜಾವರರು, ಪರ್ಯಾಯ ಕೃಷ್ಣ ಮಠದ ಮಠಾಧೀಶರು ಹಾಗೂ ಪಲಿಮಾರು ಶ್ರೀಗಳು ಒಂದು ವೇಳೆ ಒಪ್ಪಿದರೆ ಬಹುಮತಕ್ಕೆ ಒಪ್ಪಿಗೆ ನೀಡಿ ತಾವೂ ಒಪ್ಪುವುದಾಗಿ ತಿಳಿಸಿದರು.
ತಮ್ಮ ವೈಯಕ್ತಿಕ ಧೋರಣೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ತಿಳಿಸಿರುವ ಪೇಜಾವರರು ಧರ್ಮಶಾಸ್ತ್ತ್ರದ ಬಗ್ಗೆ ಮುಕ್ತ ವಿಮರ್ಶೆಗೆ ತಾವು ಸಿದ್ಧವಿರುವುದಾಗಿಯೂ ಸ್ಪಷ್ಟಪಡಿಸಿದರು.
|