ರಾಜ್ಯದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಚುನಾವಣಾ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಿ ಪರಿಷ್ಕರಣೆ ಕಾರ್ಯದ ಬಗ್ಗೆ ಮಾಹಿತಿ ಪಡೆದರು.
ಮೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವುದರಿಂದ ಕೇಂದ್ರ ಚುನಾವಣಾ ಆಯೋಗವು ಪರಿಷ್ಕರಣೆ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಸಿದ್ಧತೆ ಕಾರ್ಯ ತ್ವರಿತಗೊಳಿಸುವ ಪ್ರಯುಕ್ತ ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಆರ್. ಭಟ್ಟಾಚಾರ್ಯ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಆರ್. ರಾಮಶೇಷನ್ ಹಾಗೂ ಇತರ ಅಧಿಕಾರಿಗಳ ಜತೆ ಬೆಂಗಳೂರಿನಲ್ಲಿ ಸಮಾಲೋಚನೆ ನಡೆಸಿದರು.
ಈ ನಡುವೆ ರಾಜ್ಯದಲ್ಲಿ ನಕಲಿ ಮತದಾರರ ಪಟ್ಟಿ ಸೇರ್ಪಡೆಯಾಗಿದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವುದರಿಂದ ಕಾರ್ಯದಲ್ಲಿ ವಿಳಂಬವಾಗಬಹುದು ಎಂದು ಮೂಲಗಳು ತಿಳಿಸಿವೆ.
ಸಿದ್ಧತೆ ಕಾರ್ಯದ ಕುರಿತು ಇನ್ನೆರಡು ದಿನ ಚರ್ಚೆ ಮುಂದುವರೆಯಲಿದ್ದು ಚುನಾವಣಾ ಕಾರ್ಯಕ್ಕೆ ನೇಮಕವಾಗಿರುವ ಅಧಿಕಾರಿಗಳಿಗೆ ಕೇಂದ್ರ ಆಯೋಗವು ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಲಿದೆ. ಅಂತಿಮ ಪರಿಷ್ಕ್ಕತ ಪಟ್ಟಿ ಜನವರಿ 10ರೊಳಗೆ ಪ್ರಕಟವಾಗುವ ನೀರೀಕ್ಷೆ ಇದೆ ಎಂದು ತಿಳಿದು ಬಂದಿದೆ.
|