ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳ ನಿವಾರಣೆಗೆ ಸರ್ಕಾರ ಹೆಚ್ಚಿನ ಗಮನ ನೀಡುವುದಾಗಿ ರಾಜ್ಯಪಾಲ ರಾಮೇಶ್ವರ್ ಠಾಕೂರ್‌ರವರು ಭರವಸೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ರೈತರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ಈಗಾಗಲೇ ಕೇಂದ್ರ ಗೃಹಸಚಿವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದು, ಮಾತುಕತೆಯಲ್ಲಿ ರೈತರ ಸಮಸ್ಯೆಗಳು ಹಾಗೂ ನಿವಾರಣೆಗೆ ಅನುಸರಿಸಬೇಕಾದ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಪಂಡಿತ ಪ್ರಶಸ್ತಿ ಪ್ರದಾನ ಮಾಡಿದ ಅವರು, ಕರ್ನಾಟಕವು ದೇಶದಲ್ಲಿಯೇ ಕೃಷಿ ನೀತಿಯನ್ನು ಜಾರಿ ಮಾಡಿದ ಏಕೈಕ ರಾಜ್ಯವಾಗಿದೆ. ಪ್ರಶಸ್ತಿ ವಿಜೇತರು ಉಳಿದವರಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಮಾತನಾಡಿದ ವಿಧಾನಸಭಾ ಸಭಾಪತಿ ಪ್ರೊ. ಬಿ.ಕೆ. ಚಂದ್ರಶೇಖರ್, ಕೃಷಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಯಾಗಬೇಕಾಗಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಖಾಸಗಿ ಬಂಡವಾಳ ಹೂಡಿಕೆ ಅತಿ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ವಿಧಾನಸಭಾ ಅಧ್ಯಕ್ಷ ಕೃಷ್ಣ ಮಾತನಾಡಿ, ಎಲ್ಲಾ ರೈತರಿಗೆ ಕಡ್ಡಾಯವಾಗಿ ಸಹಕಾರ ಸಂಘದ ಸದಸ್ಯರನ್ನಾಗಿ ಮಾಡುವಂತೆ ಪ್ರೇರೆಪಿಸಬೇಕು. ಈ ಮೂಲಕ ಎಲ್ಲಾ ಸವಲತ್ತುಗಳು ರೈತರಿಗೆ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿರಬೇಕು. ಅಲ್ಲದೆ ರೈತರ ಪಾಲಿನ ಶೇರು ಬಂಡವಾಳವನ್ನು ಸರ್ಕಾರವೇ ಹೊರಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎ. ರಾಮಸ್ವಾಮಿ, ಕೃಷಿ ಆಯುಕ್ತ ರಂಜೀನೀಶ ಗೋಯಲ್, ಕೃಷಿ ನಿರ್ದೇಶಕ ಡಾ. ಎ. ರಾಜಣ್ಣ ಮೊದಲಾದ ಗಣ್ಯರು ವೇದಿಕೆಯಲ್ಲಿ ಹಾಜರಿದ್ದರು.
|