ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಎಚ್.ಕೆ. ಪಾಟೀಲ್ ತಮ್ಮ ಸ್ಥಾನ ಬಿಟ್ಟು ಕೊಡಲು ನಿರಾಕರಿಸಿದ್ದಾರೆ. ಆದರೆ ವೇತನ ಮತ್ತು ಭತ್ಯೆ ಮಾತ್ರ ಈ ಕ್ಷಣದಿಂದ ಪಡೆಯದಿರಲು ನಿರ್ಧರಿಸಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಎಚ್.ಕೆ. ಪಾಟೀಲ್, ರಾಷ್ಟ್ರಪತಿ ಆಡಳಿತದ ಜಾರಿಯಿಂದ ವಿಧಾನ ಪರಿಷತ್ತಿನ ಅಸ್ತಿತ್ವಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಅಲ್ಲದೆ, ಪರಿಷತ್ತಿನಲ್ಲಿ ಕಾಂಗ್ರೆಸ್ ಮಾನ್ಯತೆ ರದ್ದಾಗಿಲ್ಲ ಅದು ಮುಂದುವರೆಯುವವರೆಗೆ ಸ್ಥಾನ ಬಿಡುವುದಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷವು ತನ್ನನ್ನು ಸದನದಲ್ಲಿ ನಾಯಕ ಸ್ಥಾನದಲ್ಲಿ ಮುಂದುವರೆಸಿದೆ. ಆದ್ದರಿಂದ ರಾಜಿನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೂ ಸ್ಥಾನ ಮುಂದುವರಿಕೆಯ ನಿರ್ಧಾರದ ವಿಚಾರ ಸಚಿವಾಲಯಕ್ಕೆ ಸೇರಿದ್ದಾಗಿದೆ ಎಂದು ಹೇಳಿದರು.
ಈ ಹಿಂದೆ ಸದನದ ವಿರೋಧ ಪಕ್ಷದ ನಾಯಕ ಹುದ್ದೆಯಿಂದಾಗಿ ತಮಗೆ ಸಚಿವಾಲಯ ನೀಡಿರುವ ಸೌಲಭ್ಯಗಳ ಬಗ್ಗೆ ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ ತಮ್ಮ ವೇತನ, ಭತ್ಯೆ ಮತ್ತಿತರ ಸೌಲಭ್ಯಗಳನ್ನು ಪಡೆಯದಿರಲು ನಿರ್ಧರಿಸಿದ್ದೇನೆ. ಈ ಮೂಲಕ ಸಭಾಪತಿ ಪ್ರೌ. ಬಿ.ಕೆ. ಚಂದ್ರಶೇಖರ್‌ರವರಿಗೆ ಪತ್ರ ಬರೆದಿರುವುದಾಗಿ ಪಾಟೀಲ್ ತಿಳಿಸಿದ್ದಾರೆ.
ಪ್ರಸ್ತುತವಿರುವ ಸ್ಥಾನ ಹಾಗೂ ಸದನದ ಸಂಸದೀಯ ಪದಾಧಿಕಾರಿಯಾಗಿ ಕಾರ್ಯ ಮುಂದುವರಿಸಬಹುದೇ? ಎಂಬ ತೀರ್ಮಾನಗಳ ಕುರಿತು ಮಾರ್ಗದರ್ಶನ ನೀಡುವಂತೆ ತಾವು ಸಭಾಪತಿ ಚಂದ್ರಶೇಖರ್‌ರವರಿಗೆ ಪತ್ರ ಕಳಿಸಿರುವುದಾಗಿ ಅವರು ಹೇಳಿದರು.
|