ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಾಪ ಅಧ್ಯಕ್ಷ ಚುನಾವಣೆಗೆ ಸಿದ್ಧತೆ
ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಡೆಸಲು ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ತೀರ್ಮಾನಿಸಿದೆ. ಈ ಪ್ರಯುಕ್ತ ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ (ಕಸಾಪ) ಮೂಲಗಳು ತಿಳಿಸಿವೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ| ಚಂದ್ರಶೇಖರ ಪಾಟೀಲರ ಅವಧಿ ಏಪ್ರಿಲ್‌ನಲ್ಲಿ ಮುಗಿಯುವುದರಿಂದ ಅವರು ಕನ್ನಡ ಸಂಸ್ಕ್ಕತಿ ಇಲಾಖೆಗೆ ಚುನಾವಣೆ ನಡೆಸುವಂತೆ ಪತ್ರ ಬರೆದಿದ್ದು, ಅದರನ್ವಯ ಅದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಇಲಾಖೆ ನಿರ್ದೇಶಕ ಮನು ಬಳಿಗಾರ್ ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಚುನಾವಣೆಯನ್ನು ಮುಂದೂಡಲಾಗುವುದಿಲ್ಲ. ಅಧ್ಯಕ್ಷರೇ ಚುನಾವಣೆ ನಡೆಸಲು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಪರಿಷತ್ ಬೈಲಾ ನಿಯಮ ಹಾಗೂ ನಿರ್ದೇಶನದಂತೆ ಚುನಾವಣಾಧಿಕಾರಿಗಳನ್ನು ನೇಮಿಸಿ, ಚುನಾವಣಾ ಕ್ರಮಗಳನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ| ಚಂದ್ರಶೇಖರ್ ಪಾಟೀಲರ ಅವಧಿ ಅಧಿಕೃತವಾಗಿ ಅಕ್ಟೋಬರ್‌ಗೆ ಮುಗಿದಿದ್ದು, ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿಯು ಅವರ ಅಧಿಕಾರ ಅವಧಿಯನ್ನು ಏಪ್ರಿಲ್‌ವರೆಗೆ ವಿಸ್ತರಿಸಲು ಅವಕಾಶ ನೀಡಿತ್ತು. ಚಂಪಾ ತಮ್ಮ ಅಧಿಕಾರ ಅವಧಿಯಲ್ಲಿ ಮೂರು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿರುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆಯು ಸಾಹಿತ್ಯ ಪರಿಷತ್ ಚುನಾವಣೆಗೆ ರಾಜ್ಯ ಚುನಾವಣಾಧಿಕಾರಿಯನ್ನು ನೇಮಿಸಲಿದ್ದು, ಅವರು ಜಿಲ್ಲಾ ಮಟ್ಟದಲ್ಲಿ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಿದ್ದಾರೆ. ಚುನಾವಣೆಗೆ ಒಟ್ಟು ಸುಮಾರು 69 ಸಾವಿರ ಅರ್ಹ ಮತದಾರರಿದ್ದಾರೆ. ಹೊಸ ನಿಯಮದಂತೆ 100 ಮತದಾರರಿರುವ ಸ್ಥಳಗಳಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಿದೆ.

ಈ ಬಾರಿಯ ಅಧ್ಯಕ್ಷ ಸ್ಥಾನಕ್ಕೆ ಕಸಾಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಹಿರಿಯ ಸಾಹಿತಿ ಡಾ| ಸಿ. ವೀರಣ್ಣ, ಜಾನಪದ ತಜ್ಞ ಡಾ. ನಲ್ಲೂರು ಪ್ರಸಾದ್ ಹಾಗೂ ಹಿರಿಯ ವಿದ್ವಾಂಸ ಡಾ| ಎಸ್. ವಿದ್ಯಾಶಂಕರ್ರವರ ಹೆಸರುಗಳು ಕೇಳಿ ಬರುತ್ತಿವೆ. ಇವರೆಲ್ಲಾ ಈಗಾಗಲೇ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಚುನಾವಣೆ ದಿನ ಬರುತ್ತಿರುವಂತೆ ಇನ್ನಷ್ಟು ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ಸ್ಥಾನ ಬಿಟ್ಟು ಕೊಡದ ಎಚ್.ಕೆ.ಪಾಟೀಲ್
ಯುವರಂಗ ನಿರ್ದೇಶಕರಿಂದ ನಾಟಕೋತ್ಸವ
ರೈತರ ಸಮಸ್ಯೆಗಳಿಗೆ ಹೆಚ್ಚಿನ ಗಮನ
ಕೇಂದ್ರದಲ್ಲೂ ಮಧ್ಯಂತರ ಚುನಾವಣೆ ಸಾಧ್ಯತೆ
ರಾಜ್ಯಪಾಲರ ಜತೆ ಶಿವರಾಜ್ ಪಾಟೀಲ್ ಚರ್ಚೆ
ನಿಧಾನಗತಿಯ ಪಟ್ಟಿ ಪರಿಷ್ಕರಣೆಗೆ ಅಸಮಾಧಾನ