ದೇಶದ ಮೂಲೆ ಮೂಲೆಗಳಲ್ಲಿ ಸಿನಿಮಾ ಸಂಸ್ಕ್ಕತಿ ಪಸರಿಸುತ್ತಿದೆ. ಈ ಬಹುಮುಖಿ ಮಾಧ್ಯಮದ ಎಲ್ಲಾ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸಲಿದೆ ಎಂದು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸುತ್ತಾ ಹೇಳಿದರು.
ಕೇಂದ್ರ ಸರ್ಕಾರ ಗೋವಾದಲ್ಲೇ ಶಾಶ್ವತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕೇಂದ್ರವೆಂದು ಘೋಷಿಸಿದ ನಂತರ ಹಲವು ರಾಜ್ಯವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ಖ್ಯಾತ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್, ಸಮಾಜ ಮತ್ತು ಸಂಸ್ಕ್ಕತಿಯನ್ನು ಬಿಂಬಿಸುವ ಮಾಧ್ಯಮವಾಗಿ ಸಿನಿಮಾ ಕ್ಷೇತ್ರ ರೂಪುಗೊಂಡಿದೆ. ಆದರೆ ಸಿನಿಮಾ ಸಂಸ್ಕ್ಕತಿಗೆ ವಿರುದ್ಧವಾಗಿ ನಡೆದರೆ ಅದನ್ನು ಖಂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಿನಿಮಾವನ್ನು ವ್ಯಾಪಾರದ ದೃಷ್ಟಿಯಿಂದ ನೋಡಲಾಗುತ್ತಿದೆ. ಇದರಿಂದ ಉತ್ತಮ ಗುಣಮಟ್ಟದ ಮತ್ತು ಸದಭಿರುಚಿ ಚಿತ್ರಗಳು ಯಶಸ್ಸಿಗೆ ಹಿನ್ನಡೆಯಾಗಿದೆ. ಸಿನಿಮಾ ಕ್ಷೇತ್ರದ ಈ ರೀತಿಯ ಬೆಳವಣಿಗೆ ನಾಚಿಕೆ ಹುಟ್ಟಿಸುವಂಥದ್ದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಕಾರ್ಯದರ್ಶಿ ಐ.ಎಂ. ವಿಠ್ಠಲಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ, ಭಾರತೀಯ ಚಲನಚಿತ್ರ ಮಹಾಮಂಡಲ ಉಪಾಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್ ಚಿತ್ರ ನಿರ್ದೇಶಕ ಗೀರೀಶ್ ಕಾಸರವಳ್ಳಿ, ನಟ ಗಣೇಶ್, ರಮೇಶ್, ಶಿವರಾಜ್ಕುಮಾರ್, ನಟಿ ತಾರಾ, ಜಯಮಾಲಾ ಮತ್ತಿತರು ಹಾಜರಿದ್ದರು.
|