ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ಅವರು ರಾಜ್ಯ ಕಾಂಗ್ರೆಸ್ ಮುಖಂಡರ ಒತ್ತಡದ ಮೇರೆಗೆ ವಿಧಾನಸಭೆಗೆ ಸ್ಪರ್ಧಿಸುವ ಕುರಿತು ಚಿಂತನೆ ನಡೆಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಬೆಂಗಳೂರಿನ ಜಯಮಹಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಹಿರಂಗವಾಗಿ ಘೋಷಣೆಯನ್ನು ಇನ್ನೂ ಮಾಡಬೇಕಿದೆ.
ಇಂಥ ಇಳಿವಯಸ್ಸಿನಲ್ಲಿ ಲೋಕಸಭೆಗೆ ಸ್ಪರ್ಧಿಸುವುದು ಬೇಡ. ರಾಜ್ಯ ರಾಜಕೀಯಕ್ಕೆ ಪ್ರವೇಶ ಮಾಡಿ, ಅನುಭವವನ್ನು ತಮ್ಮ ಜೊತೆ ಹಂಚಿ, ಸೂಕ್ತ ಮಾರ್ಗದರ್ಶಕರಾಗಬೇಕೆಂದು ಜಯಮಹಲ್ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಷರೀಫ್ ಮೇಲೆ ಒತ್ತಡ ಹೇರಿದ್ದರಿಂದ ಷರೀಫ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆಯೇ ಕಾಂಗ್ರೆಸ್ಸಿನಲ್ಲಿ ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರ ಬಗ್ಗೆ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಕಳೆದ ಎರಡು ಮೂರು ವರ್ಷಗಳಿಂದ ಇದೊಂದು ಶೀತಲ ಸಮರವಾಗಿ ಮುಂದುವರೆದಿತ್ತು. ವಿವಾದಕ್ಕೆ ತೆರೆ ಎಳೆಯಬೇಕೆಂಬ ಉದ್ದೇಶದಿಂದ ಷರೀಫ್‌ರನ್ನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಮೂಲ ಕಾಂಗ್ರೆಸ್ಸಿಗರು ಒತ್ತಾಯಪಡಿಸಿದ್ದರು ಎನ್ನಲಾಗಿದೆ.
|