ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರಿಗೆ ರಾಜಭವನ ಬೋರ್ ಹೊಡೆಸಿದೆ. ಇದೀಗ ಕರ್ನಾಟಕದಲ್ಲಿ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ಸಕ್ರಿಯ ರಾಜಕಾರಣಕ್ಕೆ ಮರಳಿ ಬರಲು ಈ ಮಾಜಿ ಮುಖ್ಯಮಂತ್ರಿ ತೀವ್ರ ಕಾತುರತೆಯಲ್ಲಿದ್ದಾರೆ.
ತಮ್ಮ ಮನದಿಂಗಿಂತವನ್ನು ಕೃಷ್ಣ ಅವರು ಈಗಾಗಲೇ ಕಾಂಗ್ರೆಸ್ ಹೈಕಮಾಂಡ್‌ಗೆ ಅರುಹಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ಕೃಷ್ಣ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದರು ಮತ್ತು ರಾಜಭವನದಲ್ಲಿ "ಸಮಯ ವ್ಯರ್ಥ ಮಾಡುತ್ತಿರುವುದಾಗಿಯೂ, ಅಲ್ಲಿ ಬೋರ್ ಆಗುತ್ತಿದೆ ಎಂದೂ" ಸಂದೇಶ ಮುಟ್ಟಿಸಿದ್ದಾರೆ ಎಂದು ಈ ಮೂಲಗಳು ಹೇಳಿವೆ.
ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಲು ಕೃಷ್ಣ ಅವರನ್ನು ಮರಳಿ ರಾಜ್ಯಕ್ಕೆ ಕರೆಸಬೇಕು ಎಂದು ಕೃಷ್ಣ ಬೆಂಬಲಿಗರು ಲಾಬಿ ಮಾಡುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಸೋನಿಯಾ ಗಾಂಧಿಯನ್ನು ಮಾಜಿ ಮುಖ್ಯಮಂತ್ರಿ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಕೃಷ್ಣ ಅವರ ಈ ಹೆಜ್ಜೆ ಅವರ ವಿರೋಧಿಗಳಲ್ಲಿ ನಡುಕ ಹುಟ್ಟಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬದಲಾಯಿಸಿದ್ದೇ ಆದಲ್ಲಿ, ರಾಜ್ಯದಲ್ಲಿ ಮಾಯಾವತಿಯವರ ಬಿಎಸ್‍ಪಿ ಪ್ರವೇಶಕ್ಕೆ ಕಾಂಗ್ರೆಸ್ ನಾಯಕತ್ವವೇ ಕಾರಣವಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ಎಚ್ಚರಿಕೆಯನ್ನೂ ನೀಡಿದ್ದಾರೆ.
ಖರ್ಗೆ ಅವರು ಎಂಟನೇ ಅವಧಿಯ ಶಾಸಕರಾಗಿದ್ದು, ರಾಜ್ಯದಲ್ಲಿ ಶೇ.23ರಷ್ಟು ಜನಸಂಖ್ಯೆ ಹೊಂದಿರುವ ದಲಿತ ಸಮುದಾಯದ ಮುಖಂಡ. ಕೃಷ್ಣ ಅವರು ರಾಜಭವನದಲ್ಲೇ ಇರಬೇಕೋ ಅಥವಾ ರಾಜ್ಯಕ್ಕೆ ಬರಬೇಕೋ ಎಂಬುದನ್ನು ಸೋನಿಯಾ ಅವರೇ ತೀರ್ಮಾನಿಸಲಿದ್ದಾರೆ.
ಕೃಷ್ಣ ಅವರು 1999ರಲ್ಲಿ ಪಿಸಿಸಿ ಅಧ್ಯಕ್ಷರಾಗಿದ್ದಾಗ ಪಕ್ಷವನ್ನು ಚುನಾವಣೆಯಲ್ಲಿ ಯಶಸ್ವಿಯಾಗಿ ಮುನ್ನಡೆಸಿ ಅಧಿಕಾರಕ್ಕೇರಿದ್ದರು. ಆದರೆ 2004ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಅವರದೇ ನಾಯಕತ್ವದಲ್ಲಿ ಸೋಲನ್ನಪ್ಪಿತ್ತು.
|