ಶಿಸ್ತಿನ ಪಾರ್ಟಿಯೆಂದೇ ಹೆಸರಾದ ಬಿಜೆಪಿಯಲ್ಲೂ ಭಿನ್ನಮತ ಸ್ಫೋಟಿಸುತ್ತಿದೆ. ಚುನಾವಣೆ ದಿನಾಂಕವಿನ್ನೂ ಸಮೀಪಿಸಿಲ್ಲವಾದರೂ ಟಿಕೆಟ್ ಆಕಾಂಕ್ಷಿಗಳ ಉಪಟಳದಿಂದಾಗಿ ಬಿಜೆಪಿ ತತ್ತರಿಸುತ್ತಿದೆ. ಈಗಾಗಲೇ ಅನಂತ್ ಕುಮಾರ್ ಬಣ ಯಡಿಯೂರಪ್ಪ ವಿರುದ್ದ ಸೆಡ್ಡು ಹೊಡೆದು ನಿಂತಿದೆ. ಜಗದೀಶ್ ಶೆಟ್ಟರ್ ವಿರುದ್ಧ ಬಂಡಾಯದ ಬಾವುಟ ಹಾರಿಸಲಾಗುತ್ತಿದೆ. ಶೆಟ್ಟರ್ ಬೆಂಬಲಿಗರೆಂದೇ ಹೇಳಲಾದ ಮಾಜಿ ಶಾಸಕ ಶಿವಣ್ಣನವರಿಗೆ ಈ ಬಾರಿ ಟಿಕೆಟ್ ಕೊಡಬಾರದೆಂದು ಸಹಿ ಸಂಗ್ರಹಿಸಿ ಯಡಿಯೂರಪ್ಪನವರಿಗೆ ಮನವಿ ಪತ್ರ ಸಲ್ಲಿಸಿರುವುದು ಇದಕ್ಕೆ ನಿದರ್ಶನ.
ಇದುವರೆಗೂ ಅಂತರ್ಮುಖಿಯಾಗಿದ್ದ ಗುದ್ದಾಟ ಅವರ ಬೆಂಬಲಿಗರೊಬ್ಬರಿಗೆ ಟಿಕೆಟ್ ಕೊಡಬಾರದೆಂದು ಆಗ್ರಹಿಸುವುದರೊಂದಿಗೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಗೊತ್ತಾಗುತ್ತದೆ. ಯಡಿಯೂರಪ್ಪನವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಸ್ಥಳೀಯ ನಾಯಕ ಅಡಿಯಪ್ಪ, ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲೂ ಭಿನ್ನಮತೀಯರನ್ನು ಹೊರಗಿಡಬೇಕು, ಹೊಸಬರಿಗೆ ಅವಕಾಶ ಕೊಡಬೇಕು ಆಗ ಮಾತ್ರ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯ ಎಂದು ಪ್ರತಿಪಾದಿಸಿದರು.
ರಾಜ್ಯದಲ್ಲಿ ಎಲ್ಲವೂ ಸುಗಮವಾಗಿದೆ. ಪಕ್ಷದಲ್ಲಿ ಭಿನ್ನಮತ ಇಲ್ಲ. ನಾವೆಲ್ಲಾ ಒಟ್ಟಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ಎಂದಿನಂತೆ ಹಾರಿಕೆಯ ಉತ್ತರ ನೀಡಿದರು. ರಾಜ್ಯದಲ್ಲಿ ಸದಾನಂದಗೌಡರೇ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಅದಕ್ಕೆ ಸಂಶಯ ಬೇಡ ಎಂದರು.
|