ರಾಜ್ಯ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಸದಾನಂದ ಗೌಡರೇ ಮುಂದುವರೆಯಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರ ಬಗ್ಗೆ ಇದ್ದ ಗೊಂದಲಗಳಿಗೆ ಮಂಗಳ ಹಾಡಿದಂತಾಗಿದೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪನವರು, ಬಿಜೆಪಿಯಲ್ಲಿ ಭಿನ್ನಮತವೆದ್ದಿದೆ ಎಂಬ ಅಂಶಗಳು ಸತ್ಯಕ್ಕೆ ದೂರವಾಗಿದ್ದು, ಇವೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದ ಅವರು, ಅಧ್ಯಕ್ಷರ ಬಗ್ಗೆ ಯಾರಿಗೂ ಭಿನ್ನಮತವಿಲ್ಲ. ಸದಾನಂದ ಗೌಡರೇ ಮುಂದುವರಿಯಬೇಕೆನ್ನುವುದು ಬಹುತೇಕ ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.
ರಾಯಚೂರಿನಲ್ಲಿ ನಡೆದ ಸಭೆಗೆ ಸಂಸದ ಅನಂತಕುಮಾರ್ ಭಾಗವಹಿಸದಿರುವ ಕುರಿತು ಕೇಳಲಾದ ಪ್ರಶ್ನೆಗೆ, ಅನಂತಕುಮಾರ್ ಒಬ್ಬ ರಾಷ್ಟ್ತ್ರೀಯ ನಾಯಕ. ಅವರಿಗೆ ಕೆಲ ರಾಜ್ಯಗಳಲ್ಲಿ ಪಕ್ಷಗಳ ಉಸ್ತುವಾರಿಯನ್ನು ನೀಡಲಾಗಿರುವುದರಿಂದ ರಾಜ್ಯದಲ್ಲಿನ ಬಿಜೆಪಿ ಸಭೆಗಳಿಗೆ ಭಾಗವಹಿಸಲಾಗುತ್ತಿಲ್ಲ. ಹಾಗೆಂದು ಅದನ್ನೇ ಭಿನ್ನಮತ, ಅಸಮಾಧಾನ ಎಂದು ಮಾಧ್ಯಮಗಳು ವರದಿ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪ್ರಜಾತಂತ್ರ ವ್ಯವಸ್ಥೆಗೆ ದ್ರೋಹ ಮಾಡಿದ್ದಾರೆ ಎಂಬುದು ಜನಮಾನಸದಲ್ಲಿ ಮನೆ ಮಾಡಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು
|