ಉಡುಪಿ ಪರ್ಯಾಯ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದ್ದು. ವಿದೇಶಿ ಪ್ರವಾಸ ಮಾಡಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥರು ಶ್ರೀಕೃಷ್ಣ ಪೂಜೆಗೆ ಅರ್ಹರಲ್ಲ ಎಂಬ ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದು ದುರದೃಷ್ಟಕರ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕಲಾವೇದಿಕೆಯು ಪುರಭವನದಲ್ಲಿ ಆಯೋಜಿಸಿದ್ದ ವೇದಿಕೆಯ ದ್ವಿತೀಯ ವಾರ್ಷಿಕೋತ್ಸವದ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿವಾದವನ್ನು ಅಷ್ಟಮಠಗಳಲ್ಲಿ ಬಗೆಹರಿಸಬಹುದಿತ್ತು. ವಿನಾಕಾರಣ ಈ ವಿಷಯವನ್ನು ನ್ಯಾಯಾಲಯಕ್ಕೆ ಒಯ್ಯಲಾಗಿದೆ ಎಂದು ಹೇಳಿದರು.
ಈ ವಿವಾದವನ್ನು ಕೋರ್ಟಿಗೆ ಒಯ್ಯುವ ಅಗತ್ಯವಿರಲಿಲ್ಲ. ಇದು ತಮಗೆ ಅಸಮಾಧಾನ ಮೂಡಿಸಿದೆ ಎಂದ ಅವರು, ನ್ಯಾಯಾಲಯದಲ್ಲಿ ದಾವೆ ಹೂಡಿದವರು ಮಠಕ್ಕೆ ಸಂಬಂಧಿಸಿದವರಲ್ಲ ಎಂದು ತಿಳಿಸಿದರು. ಈ ಹಿಂದೆ ಕೃಷ್ಣ ಮಠದ ಪೂಜೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಉಡುಪಿ ನಿವಾಸಿಗಳಿಬ್ಬರು ಪ್ರತ್ಯೇಕವಾಗಿ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಳಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ಜಾತಿ ಬೇಧಗಳನ್ನು ತೊಡೆದು ಹಾಕುವ ಶಕ್ತಿ ಕಲೆಗೆ ಇದೆ ಎಂದು ಅವರು ತಿಳಿಸಿದರು. ಸಮಾರಂಭದಲ್ಲಿ ಎಡಿಜಿಪಿ(ಅಪರಾಧ ತಾಂತ್ರಿಕ ಸೇವೆ) ಡಾ. ಸುಭಾಷ್ ಭರಣಿ, ಕಲಾವೇದಿಕೆ ಅಧ್ಯಕ್ಷ ವಿ. ಗಜರಾಜ, ಉಪಾಧ್ಯಕ್ಷ ಎಂ ಕೋದಂಡರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
|