ರಾಜ್ಯಪಾಲ ರಾಮೇಶ್ವರ ಠಾಕೂರ್ ಮಧ್ಯಸ್ಥಿಕೆಯಿಂದಾಗಿ ಸಂಗೂರು ಸಕ್ಕರೆ ಕಾರ್ಖಾನೆ ವಿವಾದ ಕೊನೆಗೂ ಬಗೆಹರಿದಿದೆ. ಸಂಕ್ರಾಂತಿಯ ಮುನ್ನ ಸಿಹಿ ಹಂಚಿಕೊಳ್ಳುವ ಸರದಿ ಇದೀಗ ಕಬ್ಬು ಬೆಳೆಗಾರರದಾಗಿದೆ.
ವಿವಾದ ಅಂತ್ಯ ಕಾಣದೆ ಕಳೆದ 65 ದಿನಗಳಿಂದ ಸತತವಾಗಿ ಮುಷ್ಕರದ ಬಿಸಿ ಅನುಭವಿಸುತ್ತಿದ್ದ ಸಂಗೂರು ಸಕ್ಕರೆ ಕಾರ್ಖಾನೆಯ ಪುನರಾರಂಭದ ವಿಷಯ ರಾಜ್ಯದೆಲ್ಲೆಡೆ ಬಿಸಿ ಮುಟ್ಟಿಸಿತ್ತು. ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಇಂದು ಹಾವೇರಿ ಬಂದ್‌ಗೂ ಕರೆ ನೀಡಲಾಗಿತ್ತು.
ಪರಿಸ್ಥಿತಿಯ ವಿಷಮತೆಯನ್ನು ಅರ್ಥಮಾಡಿಕೊಂಡ ರಾಜ್ಯಪಾಲರು ತಕ್ಷಣವೇ ಜಾರಿಗೆ ಬರುವಂತೆ ಸಂಗೂರಿನಲ್ಲಿ ಕಬ್ಬು ಅರೆಯಲು ಸೂಚನೆ ಕೊಟ್ಟರು. ಕಾರ್ಖಾನೆಯ ಪುನರಾರಂಭದೊಂದಿಗೆ ಕಾರ್ಮಿಕರಿಗೆ ಉಳಿದಿರುವ ಬಾಕಿ ವೇತನವನ್ನು ಸಹ ಪಾವತಿಸಬೇಕೆಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ.
ರಾಜ್ಯಪಾಲರ ಆದೇಶವನ್ನು ಸ್ವಾಗತಿಸಿರುವ ಹಾವೇರಿಯ ವಿವಿಧ ಸಂಘ ಸಂಸ್ಥೆಗಳು ತಾವು ಇಂದು ನಡೆಸಲು ಉದ್ದೇಶಿಸಿದ್ದ ಬಂದ್ ಅನ್ನು ಹಿಂತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
|