ಮುಂದಿನ ಚುನಾವಣೆಯಲ್ಲಿ ಮಹಿಳೆಯರು ಹಾಗೂ ಹೊಸ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದೆಂದು ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಷೋಷಿಸಿದ್ದಾರೆ. ಈ ಮೂಲಕ ಜೆಡಿಎಸ್‌ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲ ಎಂಬ ದೂರುಗಳಿಗೆ ಮಂಗಳ ಹಾಡಿದಂತಾಗಿದೆ.
ಚುನಾವಣೆಯಲ್ಲಿ ಎಲ್ಲ ವರ್ಗದವರಿಗೆ ಪ್ರಾತಿನಿಧ್ಯವನ್ನು ಕೊಡಲಾಗುವುದು. ಚುನಾವಣಾ ಅಭ್ಯರ್ಥಿಗಳ ಅಂತಿಮ ಪಟ್ಟಿಯ ಸಿದ್ಧತಾ ಕಾರ್ಯ ಆರಂಭಗೊಂಡಿದೆ ಎಂದ ಅವರು, 35ಕ್ಕೂ ಹೆಚ್ಚು ಅಲ್ಪಸಂಖ್ಯಾತರು, 15ಕ್ಕೂ ಹೆಚ್ಚು ಪರಿಶಿಷ್ಟರು, 8ರಿಂದ 10 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎಂದು ಹೇಳಿದರು.
ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ನ್ಯಾಯಮೂರ್ತಿ ಕುಲದೀಪ್ ಸಿಂಗ್ ಅಧಕ್ಷತೆಯಲ್ಲಿ ಸಲ್ಲಿಸಿರುವ ಕ್ಷೇತ್ರ ಮರು ವಿಂಗಡಣೆ ಕುರಿತ ವರದಿಗೆ ಅನುಮೊದನೆ ನೀಡಿದ್ದು, ಜನವರಿ 10ರಂದು ರಾಷ್ಟ್ರಪತಿಯವರ ಅಂಕಿತವೂ ಅದಕ್ಕೆ ದೊರೆಯಲಿದೆ. ಅಲ್ಲದೆ ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಿದ್ದು, ಅಂತಿಮ ಪಟ್ಟಿಯನ್ನು ಬರುವ ತಿಂಗಳಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ. ಈ ಎಲ್ಲಾ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ವಿಳಂಬ ಮಾಡದೆ ಚುನಾವಣೆಗೆ ಸಕಲ ತಯಾರಿಯನ್ನು ನಡೆಸಬೇಕೆಂದು ಕರೆ ನೀಡಿದರು.
ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲಿರುವ ಜೆಡಿಎಸ್, ಚುನಾವಣೆಯಲ್ಲಿ ಬಹುಮತ ಸಾಧಿಸಲು ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಆಲೋಚಿಸಿದೆ. ಇದರ ಕುರಿತು ಈಗಾಗಲೇ ಮಾಹಿತಿ ಮತ್ತು ಸಂಗ್ರಹ ಕಾರ್ಯ ಪೂರ್ಣಗೊಂಡಿದ್ದು, ಎದುರಾಳಿ ಪಕ್ಷಗಳಲ್ಲಿನ ಅಭ್ಯರ್ಥಿಗಳ ಮಾಹಿತಿ ಪಡೆದು ಅದಕ್ಕೆ ಸಮರ್ಥರಾದ ನಾಯಕರನ್ನು ಆಯ್ಕೆ ಮಾಡಿ ಟಿಕೆಟ್ ನೀಡುವ ಕುರಿತು ಆಲೋಚಿಸುತ್ತಿದೆ.
|