ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿರುವ ಬಿಎಸ್ಪಿ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ಎಂದು ಮಾಜಿ ಸಚಿವ ಹಾಗೂ ಬಿಎಸ್ಪಿಯ ರಾಷ್ಟ್ತ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಜಿ.ಆರ್.ಸಿಂಧ್ಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಬಿಎಸ್ಪಿಯ ಪರ ಅಲೆ ಎದ್ದಿದೆ. ವೀರಶೈವರೂ ಸೇರಿದಂತೆ ಎಲ್ಲ ವರ್ಗದ ಜನರನ್ನೂ ಒಂದುಗೂಡಿಸಿ ಪಕ್ಷ ಸಂಘಟನೆಯ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ದಿನೇ ದಿನೇ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿಯನ್ನು ನೋಡಿರುವ ಮತದಾರರು ಈಗ ಮಾಯಾವತಿಯವರ ಚಿಂತನೆಗಳಿಂದ ಪ್ರೇರಿತಗೊಂಡಿದ್ದು ಬಿಎಸ್ಪಿಯನ್ನು ಈ ಬಾರಿ ಬೆಂಬಲಿಲಿಸಲಿದ್ದಾರೆ ಎಂದು ತಿಳಿಸಿದ ಸಿಂಧ್ಯಾರವರು, ತಮ್ಮ ಮೇಲೆ ವಿಶ್ವಾಸವಿಟ್ಟು ಉನ್ನತ ಹುದ್ದೆಯನ್ನು ನೀಡಿರುವುದಕ್ಕಾಗಿ ಹಗಲಿರುಳೂ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ತಿಳಿಸಿದರು.
ಈಗಾಗಲೇ ಮುರುಘಾಮಠದ ಶ್ರೀಗಳು ಮಾಯಾವತಿಯವರೊಂದಿಗೆ ಮಾತುಕತೆ ನಡೆಸಿದ್ದು, ಸದ್ಯದಲ್ಲಿಯೇ ಪೇಜಾವರ ಶ್ರೀಗಳೊಂದಿಗೂ ಕೆಲವೊಂದು ವಿಷಯಗಳನ್ನು ಚರ್ಚಿಸಲಿದ್ದಾರೆ ಎಂದು ನುಡಿದ ಸಿಂಧ್ಯಾರವರು, ಅಸೆಂಬ್ಲಿಯ ಮೂರನೇ ಒಂದು ಭಾಗದಷ್ಟು ಸದಸ್ಯರೂ ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರು ಪಕ್ಷಕ್ಕೆ ಸೇರಲಿದ್ದಾರೆ. ಪಕ್ಷವು ಈ ನಿಟ್ಟಿನಲ್ಲಿ ಬಲಗೊಳ್ಳಲಿದೆ ಎಂದು ತಿಳಿಸಿದರು.
|