ಮಹಾರಾಷ್ಟ್ತ್ರದ ರಾಜ್ಯಪಾಲ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರು ರಾಜ್ಯ ರಾಜಕಾರಣಕ್ಕೆ ಮರಳುವುದಾದಲ್ಲಿ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಹಾಸನದ ಕಾಂಗ್ರೆಸ್ ಜನಜಾಗೃತಿ ಸಭೆಯಲ್ಲಿ ಪಾಲೊಳ್ಳಲು ತೆರಳುವುದಕ್ಕೆ ಮುಂಚಿತವಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಬಂದು ಸೇರಿದಷ್ಟೂ ಪಕ್ಷದ ಬಲವರ್ಧನೆಯಾಗುವುದಲ್ಲದೇ, ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೂ ಅದು ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಎಸ್.ಎಂ.ಕೃಷ್ಣರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವುದಾದಲ್ಲಿ ರಾಜ್ಯದ ಮುಖಂಡರುಗಳೆಲ್ಲಾ ಅವರನ್ನು ಸ್ವಾಗತಿಸುತ್ತಾರೆ ಎಂದು ತಿಳಿಸಿದರು.
ಜನಜಾಗೃತಿ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕರ್ಮಕಾಂಡವನ್ನು ಜನರ ಮುಂದೆ ತೆರೆದಿಡುವುದಾಗಿ ತಿಳಿಸಿದ ಖರ್ಗೆಯವರು, ಚುನಾವಣೆಯನ್ನು ಮುಂದೂಡಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂಬ ಬಿಜೆಪಿಯ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕುತ್ತಾ, ಚುನಾವಣೆಯನ್ನು ಮುಂದೂಡಬೇಕೆನ್ನುವುದು ನಮ್ಮ ಬಯಕೆಯಲ್ಲ. ಆದರೆ ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು ಎನ್ನುವುದೇ ನಮ್ಮ ಒತ್ತಾಸೆ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಜನಜಾಗೃತಿ ಸಭೆಗಳನ್ನು ನಡೆಸಲಾದ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಗಮನಿಸಿದರೆ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಸಂದೇಹ ಇಲ್ಲ ಎಂದು ನುಡಿದ ಖರ್ಗೆ, ಹಳೆಯ ಕ್ಷೇತ್ರಗಳಲ್ಲಿಯೇ ಚುನಾವಣೆ ನಡೆಯಲಿದೆ. ಕ್ಷೇತ್ರ ಪುನರ್ ವಿಂಗಡಣೆಯ ಕುರಿತು ತಲೆಕೆಡಿಸಿಕೊಳ್ಳುವುದು ಬೇಡ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
|