ರೈಲ್ವೆ ಇಲಾಖೆಯ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಿ ಕೇವಲ ಬಿಹಾರಿಗಳಿಗೆ ಮಣೆಹಾಕಲಾಗುತ್ತಿದೆ ಎಂದು ಆರೋಪಿಸಿದ ಕನ್ನಡ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಘಟಕದ ಕಾರ್ಯಕರ್ತರು ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲು ತಡೆ ನಡೆಸಿ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು.
ಕನ್ನಡಿಗರಿಗೆ ನ್ಯಾಯೋಚಿತವಾಗಿ ಸಿಗಬೇಕಾದ ಉದ್ಯೋಗಾವಕಾಶಗಳನ್ನು ತಮಿಳುನಾಡು ಮತ್ತು ಬಿಹಾರದವರಿಗೆ ಬಿಟ್ಟುಕೊಡುತ್ತಿರುವ ಕೇಂದ್ರ ಸರ್ಕಾರವು ನಮಗೆ ಅನ್ಯಾಯ ಮಾಡುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ರೈಲು ತಡೆ ನಡೆಸಲು ಅಡ್ಡಿಪಡಿಸಿ, ಪ್ರತಿಭಟನೆಕಾರರೊಂದಿಗೆ ಅನುಚಿತವಾಗಿ ನಡೆದುಕೊಂಡ ನಿಲ್ದಾಣದ ಹಿರಿಯ ಅಧಿಕಾರಿಯ ವಿರುದ್ಧ ಕಿಡಿ ಕಾರಿದ ಪ್ರತಿಭಟನೆಕಾರರು ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗುವಷ್ಟು ರೊಚ್ಚಿಗೆದ್ದಿದ್ದರು.
ಉಗ್ರರೂಪ ತಾಳಿದ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ ಪೊಲೀಸ್ ಅಧಿಕಾರಿಗಳು ಸಂಭವನೀಯ ಅನಾಹುತಗಳನ್ನು ತಪ್ಪಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು-ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್ ರೈಲನ್ನು ಅರ್ಧಗಂಟೆಯಷ್ಟು ಕಾಲ ತಡೆಹಿಡಿಯಲಾಗಿತ್ತು ಎಂದು ಸುದ್ದಿಮೂಲಗಳು ತಿಳಿಸಿವೆ.
|