ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯದ ಜನತೆಯ ಆಶೀರ್ವಾದವಿದೆ. ಹೀಗಾಗಿ ಅವರನ್ನು ಯಾರೂ ಮೂಲೆಗುಂಪು ಮಾಡುವುದು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸಿದ್ದ ಸಂದರ್ಭದಲ್ಲಿ ಜೆಡಿಎಸ್ ಅವನತಿಯ ಹಾದಿ ಹಿಡಿಯುವಂತಾಗಿತ್ತು. ಇದನ್ನು ತಪ್ಪಿಸಲೆಂದೇ ಕುಮಾರಸ್ವಾಮಿ ಬಿಜೆಪಿಯವರ ಜೊತೆ ಸಮ್ಮಿಶ್ರ ಸರ್ಕಾರದ ರಚನೆಗೆ ಮುಂದಾದರು. ಮೂಲೆಗುಂಪಾಗಿದ್ದ ಬಿಜೆಪಿ ಬೆಳೆಯಲು ಈ ಆತುರದ ನಿರ್ಧಾರ ಕಾರಣವಾಯಿತು ಎಂದು ಅಭಿಪ್ರಾಯಪಟ್ಟರು.
ರಾಜಕಾರಣದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿರುವ ದೇವೇಗೌಡರು ಪ್ರಧಾನಿ ಸ್ಥಾನವನ್ನಲಂಕರಿಸುವ ಮೂಲಕ ಈಗಾಗಲೇ ತಮ್ಮ ವಿರೋಧಿಗಳಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ ಎಂದು ರೇವಣ್ಣ ಈ ಸಂದರ್ಭದಲ್ಲಿ ನುಡಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ಮಾಡಿದ ಸಾಧನೆಯನ್ನು ತಮ್ಮ ಸಾಧನೆಯೆಂಬಂತೆ ಬಿಜೆಪಿ ನಾಯಕರು ಪ್ರತಿಬಿಂಬಿಸುತ್ತಿದ್ದಾರೆ. ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗಾಗಿ ನೀಡಲಾಗಿದ್ದ 200 ಕೋಟಿ ರೂಪಾಯಿ ಹಣ ತಮ್ಮ ಸಾಧನೆಯಿಂದ ಬಂದದ್ದು ಎಂದು ಇಲ್ಲಿನ ಬಿಜೆಪಿ ಶಾಸಕರು ಹೇಳಿಕೊಳ್ಳುತ್ತಿದ್ದಾರೆ ಎಂದು ರೇವಣ್ಣ ತಿಳಿಸಿದರು. ಜೆಡಿಎಸ್ ಮುಖಂಡರಾದ ಕುಡಕುಂದಿ ಶಿವಲಿಂಗೇಗೌಡ, ಜಿ.ಎಸ್.ಗುರುಸಿದ್ದಪ್ಪ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
|