ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ವತಿಯಿಂದ ಹೊಸಬರಿಗೆ ಟಿಕೆಟ್ ನೀಡಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷಕ್ಕೆ ಸೇರ್ಪಡೆಯಾಗಲು ಈಗಾಗಲೇ ಹಲವು ಹಿರಿಯ ರಾಜಕಾರಣಿಗಳು ಉತ್ಸುಕರಾಗಿದ್ದಾರೆ. ಪಕ್ಷ ಸೇರುವಂತೆ ಎಂ.ಪಿ.ಪ್ರಕಾಶ್ ಹಾಗೂ ರಾಜಶೇಖರಮೂರ್ತಿಯವರಿಗೂ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೇರಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಸ್ವಂತ ಬಲದ ಮೇಲೆ ಬಿಎಸ್ಪಿ ಸ್ಪರ್ಧಿಸಲಿದೆ. ಈ ಹಿಂದೆ ಕೇವಲ ಒಂದು ವರ್ಗದ ಪಕ್ಷವಾಗಿದ್ದ ಬಿಎಸ್ಪಿ ಈಗ ತನ್ನ ತತ್ವ ಸಿದ್ಧಾಂತಗಳನ್ನು ಬದಲಾವಣೆ ಮಾಡಿಕೊಂಡಿದೆ. ಎಲ್ಲಾ ವರ್ಗದ ಬಡ ಜನರೂ ಮೀಸಲಾತಿಯ ಪ್ರಯೋಜನವನ್ನು ಪಡೆಯಬೇಕು ಎಂಬುದೇ ಇದರ ಹಿಂದಿನ ಉದ್ದೇಶ ಎಂದು ಸಿಂಧ್ಯಾ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ನಿರ್ಧರಿಸುವ ಮಟ್ಟಿಗೆ ರಾಜ್ಯದ ಮತದಾರರು ಬುದ್ದಿವಂತರಾಗಿದ್ದಾರೆ. ಹೀಗಾಗಿ ಜನಜಾಗೃತಿ ಯಾತ್ರೆ, ಧರ್ಮಯಾತ್ರೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯ ಬಿಎಸ್ಪಿಗೆ ಇಲ್ಲ ಎಂದ ಸಿಂಧ್ಯಾ, ರಾಜ್ಯವನ್ನಾಳಿದ ಇತರ ಪಕ್ಷಗಳು ನೀಡಿದ್ದಕ್ಕಿಂತ ಉತ್ತಮ ಆಡಳಿತ ನೀಡುವುದು ತಮ್ಮ ಪಕ್ಷದ ಗುರಿ ಎಂದು ತಿಳಿಸಿದರು.
|