ಹಲವು ದಿನಗಳಿಂದ ಮುಸುಕಿನೊಳಗಿನ ಸುದ್ದಿಯಾಗಿಯೇ ಕಾಡುತ್ತಿದ್ದ ಕೃಷ್ಣರ ರಾಜಕೀಯ ಮರುಪ್ರವೇಶಕ್ಕೀಗ ಕಾಲ ಕೂಡಿ ಬಂದಂತಿದೆ. ಸಂಕ್ರಾಂತಿ ಹಬ್ಬದ ನಂತರ ರಾಜ್ಯ ರಾಜಕೀಯಕ್ಕೆ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣರು ಮರಳುವ ಸುದ್ದಿಗಳು ದಟ್ಟವಾಗಿವೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಈಗ್ಗೆ ಕೆಲ ತಿಂಗಳ ಹಿಂದೆ ರಾಜ್ಯಪಾಲ ಹುದ್ದೆ ತೊರೆಯಲು ಕೃಷ್ಣರು ಮುಂದಾಗಿದ್ದರೂ ಪಕ್ಷದ ವರಿಷ್ಠರು ಅದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ವರಿಷ್ಠರೂ ಸೇರಿದಂತೆ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿದ ಕೃಷ್ಣರವರು ತಮ್ಮ ಮನವಿಯನ್ನು ಸಲ್ಲಿಸಿದರು ಎಂದು ತಿಳಿದುಬಂದಿದೆ.
2004ರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತಕ್ಕೆ ಬಂದಾಗ, ಎರಡೂ ಪಕ್ಷಗಳ ವರಿಷ್ಠರ ನಡುವೆ ನಡೆದ ಮಾತುಕತೆಯಂತೆ ರಾಜ್ಯದ ಸಕ್ರಿಯ ರಾಜಕಾರಣದಿಂದ ಕೃಷ್ಣರನ್ನು ಹೈಕಮಾಂಡ್ ದೂರವಿಡಲು ಬಯಸಿತ್ತು. ಆಗ ನೆರವಿಗೆ ಬಂದದ್ದೇ ಮಹಾರಾಷ್ಟ್ರದ ರಾಜ್ಯಪಾಲರ ಹುದ್ದೆ. ಈ ಹುದ್ದೆಯನ್ನು ಒಲ್ಲದ ಮನಸ್ಸಿನಿಂದಲೇ ಕೃಷ್ಣರು ಒಪ್ಪಿಕೊಂಡಿದ್ದರು.
ಈ ನಡುವೆ ಮಲ್ಲಿಕಾರ್ಜುನ ಖರ್ಗೆಯವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಪಕ್ಷ ಕಟ್ಟಿದವರನ್ನು ಬಿಟ್ಟು ಎಲ್ಲಿಂದಲೋ ತಂದು ನಾಯಕರಂತೆ ಹೇರುವುದು ಏಕೆ ಎಂಬ ಮಾತುಗಳೂ ಈ ಸಂದರ್ಭದಲ್ಲಿ ಕೇಳಿಬಂದಿದ್ದವು. ಇವೆಲ್ಲದಕ್ಕೆ ಪುಷ್ಟಿ ನೀಡುವಂತೆ ಬೆಂಗಳೂರಿನ ದೇವಾಲಯವೊಂದರಲ್ಲಿ ಕೃಷ್ಣರು ಪೂಜೆ-ಹೋಮ ಇತ್ಯಾದಿಗಳನ್ನು ನಡೆಸಿದ್ದು ಅವರು ರಾಜ್ಯಕ್ಕೆ ಮರಳುವುದು ಖಚಿತ ಎಂಬ ಸುದ್ದಿಯನ್ನು ತೇಲಿಬಿಟ್ಟಿದ್ದವು.
ಆದರೆ ಈ ಕುರಿತು ಕೆಲಕಾಲ ಯಾವುದೇ ಸುದ್ದಿ ಹೊರಬೀಳದೆ ಖರ್ಗೆಯವರೇ ಚುನಾವಣೆಯ ನಾಯಕತ್ವ ವಹಿಸುತ್ತಾರೆ ಎಂಬ ಮಾಹಿತಿಗಳು ಹೊರಬರಲಾರಂಭಿಸಿದವು. ಇದರ ಜೊತೆಗೆ ಧರಂಸಿಂಗ್ ಹಾಗೂ ಖರ್ಗೆಯವರು ಸಾರ್ವಜನಿಕ ಸಮಾರಂಭಗಳಲ್ಲಿ ಪರಸ್ಪರರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಘೋಷಿಸುವ ಸರ್ಕಸ್ ಕೂಡಾ ನಡೆದಿತ್ತು.
ಅದರೆ ತೀರಾ ಇತ್ತೀಚೆಗೆ, ಎಸ್.ಎಂ.ಕೃಷ್ಣರು ರಾಜ್ಯ ರಾಜಕೀಯಕ್ಕೆ ಮರಳುವುದಾದಲ್ಲಿ ತಮ್ಮನ್ನೂ ಒಳಗೊಂಡಂತೆ ಪಕ್ಷದ ಹಲವು ಮುಖಂಡರು ಅವರನ್ನು ಸ್ವಾಗತಿಸುತ್ತೇವೆ ಎಂದು ಖರ್ಗೆಯವರು ಹೇಳಿಕೆ ನೀಡಿದ್ದು ಕೃಷ್ಣರ ಮರಳುವಿಕೆಯನ್ನು ಖಚಿತ ಪಡಿಸಿತ್ತು.ಈಗ ಕೃಷ್ಣರ ಮುಂದಿನ ಹೆಜ್ಜೆಯ ಕಡೆಗೇ ಎಲ್ಲರೂ ಕುತೂಹಲದಿಂದ ನೋಡುವಂತಾಗಿದೆ.
|