ಜೆಡಿಎಸ್‌ನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತದೆ ಎಂದು ಮಾಜಿ ಸಚಿವರಾದ ಬಿ.ಎನ್. ಬಚ್ಚೇಗೌಡ ಮತ್ತು ಎಚ್.ಎನ್. ನಂಜೇಗೌಡರವರು ಬಿಜೆಪಿಗೆ ಸೇರುವ ಒಲವು ವ್ಯಕ್ತಪಡಿಸಿದ್ದಾರೆ. ಬಚ್ಚೇಗೌಡರು ಹೊಸಕೋಟೆ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ನಿಲ್ಲಲು ಬಯಸಿದ್ದು, ಟಿಕೆಟ್ ಖಾತರಿ ಪಡಿಸಿಕೊಂಡ ನಂತರ ಅಂತಿಮ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಒಕ್ಕಲಿಗರ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಒಕ್ಕಲಿಗರ ಮತವನ್ನು ಪಡೆಯುವ ಸಲುವಾಗಿ ಬಿಜೆಪಿ ಈಗಾಗಲೇ ಬಚ್ಚೇಗೌಡರೊಂದಿಗೆ ಮಾತುಕತೆ ನಡೆಸಿದೆ ಎಂದು ತಿಳಿದು ಬಂದಿದೆ.
ಕುಟುಂಬ ನಾಯಕತ್ವವಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ದೂರ ಇರಲು ಬಯಸಿರುವುದಾಗಿ ತಿಳಿಸಿದ ನಂಜೇಗೌಡರು, ಪ್ರಜಾಪ್ರಭುತ್ವದ ಬಗ್ಗೆ ತಮಗೆ ನಂಬಿಕೆಯಿದ್ದು, ಬಿಜೆಪಿ ಸೇರುವ ಕುರಿತು ಈಗಾಗಲೇ ಮೊದಲ ಸುತ್ತಿನ ಮಾತುಕತೆ ಮುಗಿದಿದೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಂಜೇಗೌಡರು ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಕಸರತ್ತುಗಳು ಪ್ರಾರಂಭವಾಗಿದೆ. ಯಾವ ಪಕ್ಷದಲ್ಲಿದ್ದರೆ ಗೆಲುವು ಸಾಧಿಸಬಹುದು ಎನ್ನುವುದಕ್ಕಿಂತ ಯಾವ ಪಕ್ಷದಲ್ಲಿ ಟಿಕೆಟ್ ನೀಡುತ್ತಾರೆ ಎಂಬ ಆಧಾರದ ಮೇಲೆ ಪಕ್ಷ ಸೇರುವ ಕೆಲಸ ಪ್ರಾರಂಭವಾಗಿದೆ. ಕಾಂಗ್ರೆಸ್‌ನಲ್ಲಿ ಕೆಲವು ನಾಯಕರು ಕೂಡ ಬಿಜೆಪಿಯತ್ತ ಒಲವು ತೋರಿಸಿದ್ದು, ಮಾಜಿ ಸಂಸದರಾದ ಪ್ರೇಮಚಂದ್ರ ಸಾಗರ್ ಮತ್ತು ಕೋಳೂರು ಬಸವನಗೌಡರು ಅವರಲ್ಲಿ ಪ್ರಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.
|