ರಾಜ್ಯದ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಡಿ ಗ್ರೂಪ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಕ್ಷಣಾ ವೇದಿಕೆ ಕಾರ್ಯಕರ್ತರು ಯಶವಂತಪುರದ ರೈಲ್ವೆ ಮೈದಾನದಲ್ಲಿ ನಡೆಯುತ್ತಿರುವ ರೈಲ್ವೆ ಮಂಡಳಿಯ ಪರೀಕ್ಷೆಗೆ ಅಡ್ಡಿ ಪಡಿಸಿದ ಪರಿಣಾಮ ಪೊಲೀಸರು ಲಾಠಿ ಪ್ರಹಾರ ಮಾಡಿದರು.
ಯಶವಂತಪುರ ರೈಲ್ವೆ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪರೀಕ್ಷೆಗೆ ಅಡ್ಡಿ ಪಡಿಸಿ ರೈಲ್ವೆ ನೇಮಕಾತಿಯ ವಿರುದ್ಧ ಘೋಷಣೆಯನ್ನು ಕೂಗಿದರು. ಈ ಪ್ರತಿಭಟನೆಯಿಂದ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಗಳು ಪಲಾಯನ ಮಾಡಿದ್ದರಿಂದ ಪರೀಕ್ಷೆಯನ್ನು ರದ್ದು ಪಡಿಸಲಾಯಿತು.
ಬಿಹಾರಿಗಳನ್ನು ರಾಜ್ಯ ರೈಲ್ವೆ ಇಲಾಖೆಗೆ ಭರ್ತಿ ಮಾಡುವುದನ್ನು ವಿರೋಧಿಸಿ ಈ ಕ್ಷಣದಿಂದಲೇ ನೇಮಕಾತಿ ಕಾರ್ಯ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದ ಕಾರ್ಯಕರ್ತರು ಅರ್ಹತಾ ಪರೀಕ್ಷೆಯ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರೆ, ಇನ್ನೊಂದು ಕಡೆಯಲ್ಲಿ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ರೈಲು ತಡೆಯನ್ನು ಮಾಡಿದರು.
ಈ ಮೊದಲು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾರ್ಯಕರ್ತರಿಗೆ ಪರೀಕ್ಷೆಗೆ ಅಡ್ಡಿಪಡಿಸದಂತೆ ಮನವಿ ಮಾಡಿದರೂ, ಅದಾವುದಕ್ಕೂ ಕಿವಿಗೊಡದ ಕಾರ್ಯಕರ್ತರು ತೀವ್ರವಾಗಿ ಪ್ರತಿಭಟನೆಯನ್ನು ಮುಂದುವರೆಸಿದರು. ಬಳಿಕ ಪೊಲೀಸರು ಲಾಠಿ ಪ್ರಹಾರ ಮಾಡಿ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದರು.
|