ಸರಕಾರಕ್ಕೆ ಪಾವತಿಸಬೇಕಿರುವ ತೆರಿಗೆ ಹಣದ ಪೈಕಿ 8 ಕೋಟಿ ರೂಪಾಯಿಗಳನ್ನು ಫೆಬ್ರವರಿ 7ರೊಳಗಾಗಿ ಪಾವತಿಸಬೇಕು ಎಂದು ಸಂಜಯ ಖಾನ್‌ರವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸಂಜಯಖಾನ್ ಒಡೆತನದಲ್ಲಿರುವ ನೆಲಮಂಗಲದ ಬಳಿಯ ಲಿವರ್ಲ್ಡ್ ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಗೋಲ್ಡನ್ ಪಾಮ್ ಮತ್ತು ಸ್ಪಾ ಸಂಸ್ಥೆಗಳಿಗೆ ಸಂಬಂಧಿಸಿ ಈ ನಿರ್ದೇಶನ ಹೊರಬಿದ್ದಿದೆ ಎಂದು ತಿಳಿದುಬಂದಿದೆ.
2001ರಿಂದಲೂ ಸರ್ಕಾರಕ್ಕೆ ಸಂಜಯ ಖಾನ್ ಪಾವತಿಸಬೇಕಿದ್ದ ವಿಲಾಸಿ ತೆರಿಗೆ ಹಾಗೂ ಮಾರಾಟ ತೆರಿಗೆಯ ಬಾಕಿ ಹಣವೇ 22 ಕೋಟಿ ರೂ. ಆಗುತ್ತದೆ. ಇದರ ಪೈಕಿ 8ಕೋಟಿ ರೂ.ಗಳನ್ನು ಫೆಬ್ರವರಿ 7ರೊಳಗಾಗಿ ಪಾವತಿಸಿ ಉಳಿದ ಹಣವನ್ನು ನಂತರದ 4 ವಾರದೊಳಗಾಗಿ ಪಾವತಿಸಬೇಕು ಹಾಗೂ ಈ ಸಂಬಂಧ ಜನವರಿ 14ರೊಳಗಾಗಿ ನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಸರ್ಕಾರದ ಅರ್ಜಿಯನ್ನು ಆಲಿಸಿದ ವಿಭಾಗೀಯ ನ್ಯಾಯಪೀಠ ನಿರ್ದೇಶನ ನೀಡಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಒಂದು ವೇಳೆ ನಿಗದಿಪಡಿಸಿರುವ ಅವಧಿಯೊಳಗಾಗಿ ತೆರಿಗೆ ಹಣ ಪಾವತಿಸದಿದ್ದರೆ ಸಂಜಯ ಖಾನ್‌ರವರ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು ಕಾನೂನಿನ ಪ್ರಕಾರ ಕ್ರಮ ಜರುಗಿಸಿ ತೆರಿಗೆ ವಸೂಲು ಮಾಡಬಹುದು ಎಂದು ನ್ಯಾಯಪೀಠ ಆದೇಶ ನೀಡಿದೆ ಎಂದು ತಿಳಿದುಬಂದಿದೆ.
|