ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಸವಿತಾ ಸಮಾಜದವರ ಬೇಡಿಕೆಗಳಿಗೆ ರಾಜ್ಯ ಸರ್ಕಾರವು ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸವಿತಾ ಕಲಾ ಸಂಘದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಸವಿತಾ ಕಲಾ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೌರಿಕ ವೃತ್ತಿ ಪ್ರಾಚೀನ ವೃತ್ತಿಗಳಲ್ಲಿ ಒಂದಾಗಿದ್ದು, ತನ್ನದೇ ಆದ ಮಹತ್ವವನ್ನು ಪಡೆದಿದೆ. ಈ ನಿಟ್ಟಿನಲ್ಲಿ ಅವರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವ ಆಸ್ಕರ್ ಫರ್ನಾಂಡೀಸ್ ಮಾತನಾಡಿ, ಕ್ಷೌರಿಕರು ತಮ್ಮ ಪಾಲಿನ ಕೊಡುಗೆಯನ್ನು ನೀಡಿದರೆ ಭವಿಷ್ಯ ನಿಧಿ ಯೋಜನೆಯ ಸೌಲಭ್ಯವನ್ನು ಕಲ್ಪಿಸಿಕೊಡಲು ಕಷ್ಟವಾಗಲಾರದು ಎಂದು ತಿಳಿಸಿದರು.
ಮದುವೆ, ಶುಭ ಸಮಾರಂಭಗಳಿಗೆ ಎಲ್ಲರೂ ಬ್ಯೂಟಿ ಪಾರ್ಲರ್‌ಗಳಿಗೆ ತೆರಳುವುದರಿಂದ ಪ್ರತಿಯೊಬ್ಬರಿಗೂ ಈ ಸೇವೆಯ ಅಗತ್ಯವಿದೆ. ಆದ್ದರಿಂದ ಬ್ಯೂಟಿ ಪಾರ್ಲರ್ ವೃತ್ತಿಯಲ್ಲಿ ತೊಡಗಿರುವವರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಈ ಸಮಾಜದವರ ಶಿಕ್ಷಣ ಸಂಸ್ಥೆಗೆ ತಮ್ಮ ನಿಧಿಯಿಂದ 10ಲಕ್ಷ ರೂಪಾಯಿ ನೀಡುವುದಾಗಿ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು.
ಕನ್ನಡ ಸಂಸ್ಕ್ಕತಿ ಇಲಾಖೆಯ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ, ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾನ ಕಲಾವಿದ ಡಾ. ಆರ್.ಕೆ. ಶ್ರೀಕಂಠನ್, ಕ್ಲಾರಿಯೊನೇಟ್ ವಿದ್ವಾಂಸರಾದ ಎ.ಕೆ.ಸಿ. ನಟರಾಜನ್, ಡಾ. ಪಂಡಿತ್ ನರಸಿಂಹಲು ವಡವಾಟಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ಡಾ. ಮಾಸ್ಟರ್ ಹಿರಣ್ಯಯ್ಯ, ನಾಗಸ್ವರ ಕಲಾವಿದ ಎಂ.ಪಿ.ಎನ್.ಪೊನ್ನುಸ್ವಾಮಿ ಪಿಳ್ಳೈ, ಪಿ. ರಾಜಗೋಪಾಲ್ ಅವರಿಗೆ ಸವಿತಾ ಕಲಾ ರತ್ನ ಪ್ರಶಸ್ತಿ, ವಿದ್ವಾನ್ ವಿ. ಕೋಟೆ, ಕೆ.ಎಸ್.ಮಣಿ ಹಾಗೂ ಲಯ ಪ್ರವೀಣ ಆರ್. ರಾಜ್ಕುಮಾರ್ ಅವರಿಗೆ ಸವಿತಾ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
|