ಸಂಜೆ ಆರರಿಂದ ಏಳು ಗಂಟೆಯವರೆಗೆ ಯಾವುದೇ ರೀತಿಯ ಕಾಮಗಾರಿ ಮಾಡದಂತೆ ನಾಗಾರ್ಜುನ ಕಂಪೆನಿಗೆ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಎಲ್ಲೂರು ಗ್ರಾಮದ ನಿವಾಸಿಗಳು ನಾಗಾರ್ಜುನ ಕಂಪೆನಿಯ ಕಾಮಗಾರಿಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಆದೇಶವನ್ನು ನ್ಯಾಯಾಲಯ ಹೊರಡಿಸಿದೆ.
ನ್ಯಾಯಾಲಯದ ಆದೇಶದಂತೆ ರಾತ್ರಿ 6ರಿಂದ 7ರವರೆಗೆ ಬಂಡೆ ಒಡೆಯುವುದು ಕಟ್ಟಡ ಕಟ್ಟುವುದು ಹಾಗೂ ದೊಡ್ಡ ಹೊಂಡ ಮಾಡುವುದು ಇತ್ಯಾದಿ ಕಾರ್ಯಗಳನ್ನು ನಡೆಸದಂತೆ ನ್ಯಾಯಾಲಯ ಆದೇಶಿಸಿದೆ ಎಂದು ನ್ಯಾಯವಾದಿ ಪ್ರದೀಪ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಇದರಿಂದ ಉಂಟಾದ ಹಾನಿ, ಅನಧಿಕೃತ ಕಟ್ಟಡ, ಕೊಳವೆ ಬಾವಿಗಳ ನಿರ್ಮಾಣ, ಧೂಳು, ಮುಚ್ಚಿದ ರಸ್ತೆ ಕುರಿತ ವರದಿ ಸಲ್ಲಿಸಲು ಕೋರಿದ್ದು, ತುರ್ತು ಜಾರಿ ಮಾಡಲು ನ್ಯಾಯಾಲಯ ಆದೇಶ ಹೊರಡಿಸಿದೆ ಎಂದ ಅವರು, ನಾಗಾರ್ಜುನ ಕಂಪೆನಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಈ ಕುರಿತು ಶೀಘ್ರದಲ್ಲಿಯೇ ದಾವೆ ಹೂಡುವುದಾಗಿ ತಿಳಿಸಿದರು.
ಈ ಹಿಂದೆಯೇ ಅರಣ್ಯ ಇಲಾಖೆಯವರು ಕಂಪೆನಿಯ ಮೇಲೆ ಪ್ರಕರಣ ದಾಖಲಿಸಿದ್ದರು. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದಕ್ಕೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಅವರು ಒತ್ತಾಯಿಸಿದರು.
|