ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆಯ ಪ್ರಕರಣದ ವಿಚಾರಣೆ ವೇಳೆ ಹಗುರ ಮಾತುಗಳನ್ನಾಡಿದ ಐಎಎಸ್ ಅಧಿಕಾರಿಯೊಬ್ಬರು ನ್ಯಾಯಾಧೀಶರ ತರಾಟೆಗೆ ಈಡಾಗಿ ಕ್ಷಮಾಪಣೆ ಕೇಳಿದ ಘಟನೆ ಕರ್ನಾಟಕ ಹೈ ಕೋರ್ಟಿನಲ್ಲಿ ಮಂಗಳವಾರ ಸಂಭವಿಸಿದೆ.
ನ್ಯಾಯಮೂರ್ತಿಗಳಾದ ವಿ.ಎಲ್ ಸಭಾಹಿತ್ ಮತ್ತು ಎಲ್.ನಾರಾಯಣ ಸ್ವಾಮಿ ಅರನ್ನೊಳಗೊಂಡಿದ್ದ ವಿಭಾಗೀಯ ಪೀಠವು, "ಕಕ್ಷಿದಾರ ಬಳ್ಳಾರಿಯಿಂದ ಬೆಂಗಳೂರಿಗೆ ಹೇಗೆ ಬರುತ್ತಾನೆ" ಎಂಬ ಪ್ರಶ್ನೆ ಕೇಳಿದಾಗ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ, "ಅವರು ಹೆಲಿಕಾಪ್ಟ್‌ರ್‌ನಲ್ಲಿ ಬರ್ತಾರೆ" ಎಂದು ಗೇಲಿಯ ಮಾತನ್ನಾಡಿ ಗಹಗಹಿಸಿ ನಕ್ಕರು. ಪ್ರಮಾದದ ಅರಿವಾದ ತಕ್ಷಣ ಕ್ಷಮೆಯನ್ನೂ ಯಾಚಿಸಿದರು.
ಅಧಿಕಾರಿಯ ಈ ವರ್ತನೆಯಿಂದ ಕುಪಿತಗೊಂಡ ನ್ಯಾಯಪೀಠ, ಭೇಷರತ್ ಕ್ಷಮಾಪಣೆ ಕೇಳುವ ಪ್ರಮಾಣಪತ್ರ ಬರೆಸಿಕೊಂಡು, ಬಳಿಕ ನ್ಯಾಯಾಲಯದಿಂದ ಹೊರಗೆ ತೆರಳಲು ಆಜ್ಞಾಪಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಮಹೇಂದರ್ ಜೈನ್ ನ್ಯಾಯಾಲಯದಲ್ಲಿ ಗೈರು ಹಾಜರಾಗಿದ್ದರು. ಹಾಜರಾಗಲು ನೀಡಿದ್ದ ನ್ಯಾಯಾಲಯದ ಆದೇಶವನ್ನು ಕಡೆಗಣಸಿದ್ದ ಕಾರಣಕ್ಕೆ ಅವರಿಗೆ 500 ರೂಪಾಯಿ ದಂಡ ವಿಧಿಸಿತು.
ಗಣಿಗಾರಿಗೆ ಮಾಡುವುದಕ್ಕಾಗಿ ಕೆ.ವೆಂಕಣ್ಣ ಎಂಬುವವರಿಗೆ 150 ಎಕರೆ ಭೂಮಿ ಸರ್ಕಾರ ಮಂಜೂರು ಮಾಡಿತ್ತು. ಆದರೆ ಅವಧಿ ಮುಗಿಯುವ ಮೊದಲೇ ಈ ಜಮೀನನ್ನು ಸಂಡೂರು ತಾಲೂಕಿನ ಕುಮಾರಸ್ವಾಮಿ ಬಡಾವಣೆಯ ಕುಮಾರ ಗೌಡ ಎಂಬುವವರಿಗೆ ಭೂಮಿ ಅಲಾಟ್ ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಹೂಡಿದ್ದ ಪ್ರಕರಣದಲ್ಲಿ ವೆಂಕಣ್ಣ ಅವರಿಗೇ ಜಮೀನು ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಲಾಗಿತ್ತು.
ಆದರೆ, ಅವರು ಇಬ್ಬರು ಐಎಎಸ್ ಅಧಿಕಾರಿಗಳು ಆದೇಶ ಪಾಲಿಸದಿದ್ದರಿಂದ ಅವರ ಮೇಲೆ ನ್ಯಾಯಾಲಯ ನಿಂದನೆ ಪ್ರಕರಣದ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲೆ ಮೇಲಿನ ಪ್ರಕರಣ ಸಂಭವಿಸಿದೆ.
|