ರೈಲ್ವೆ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಿದ್ದ ಕನ್ನಡ ಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಹೋರಾಟಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ.
ರೈಲ್ವೆ ಇಲಾಖೆ ನಡೆಸುತ್ತಿರುವ ಡಿ ಗ್ರೂಪ್ ಹುದ್ದೆಯ ಅಭ್ಯರ್ಥಿಗಳ ದೈಹಿಕ ಅರ್ಹತಾ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಯವರೆಗೆ ಮೂಂದೂಡಿದೆ.
ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜನವರಿ 10ರಂದು ನಡೆಯಬೇಕಾಗಿದ್ದ ದೈಹಿಕ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಸ್. ದಶರಥಿ ತಿಳಿಸಿದ್ದಾರೆ.
ಕೆಲವು ದಿನಗಳಿಂದ ರೈಲ್ವೆ ಇಲಾಖೆಯ ವಿರುದ್ಧ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯ ಈ ಮಹತ್ವದ ನಿರ್ಧಾರವನ್ನು ಪಡೆದುಕೊಂಡಿದೆ.
ಈ ಹೋರಾಟಕ್ಕೆ ಸಂಬಂಧಿಸಿದಂತೆ ಜನವರಿ 11ರಂದು ಕರವೇ ಕರೆದಿದ್ದ ರಾಜ್ಯವ್ಯಾಪಿ ಬಂದ್‌ನ್ನು ಹಿಂತೆಗೆಯುವ ಸಾಧ್ಯತೆಗಳಿದ್ದರೂ, ರೈಲ್ವೆ ನೇಮಕಾತಿ ಪ್ರಕ್ರಿಯೆ ಮುಂದೂಡುವುದು ತಮ್ಮ ಬೇಡಿಕೆಯಾಗಿರಲಿಲ್ಲ. ಹೊಸದಾಗಿ ನೇಮಕ ಪ್ರಕ್ರಿಯೆ ಪ್ರಾರಂಭವಾಗಬೇಕು. ಅದರಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಅಲ್ಲದೆ, ರೈಲ್ವೆ ನೇಮಕಾತಿ ಸಂಪೂರ್ಣ ರದ್ದಾಗುವವರೆಗೆ ಹೋರಾಟ ನಡೆಸುವುದಾಗಿ ಕರವೇ ಎಚ್ಚರಿಸಿದೆ.
|