ವಿಧಾನಸಭೆ ಚುನಾವಣೆಯ ಅಂತಿಮ ನಿರ್ಧಾರ ಪ್ರಕಟಿಸಲು ಆಗಮಿಸಿರುವ ಕೇಂದ್ರ ಚುನಾವಣಾ ಆಯುಕ್ತರನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಭೇಟಿಯಾಗಿ ಪ್ರತ್ಯೇಕವಾದ ಮನವಿಯನ್ನು ಸಲ್ಲಿಸಿದವು.
ಬಿಜೆಪಿ ಸಲ್ಲಿಸಿರುವ ಮನವಿ ಪತ್ರದಲ್ಲಿ ಅವಧಿಗಿಂತ ಮೊದಲೇ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದು, ಕಾಂಗ್ರೆಸ್ ಮೊದಲು ಅದರಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಬಳಿಕ ಚುನಾವಣೆ ನಡೆಸಬೇಕೆಂದು ಮನವಿಯಲ್ಲಿ ತಿಳಿಸಿವೆ.
ಇಬ್ಬರ ಮನವಿಯನ್ನು ಸ್ವೀಕರಿಸಿದ ಆಯುಕ್ತರು ಇಬ್ಬರ ಬೇಡಿಕೆಗೆ ಸ್ಪಂದಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ಉಪಾಧ್ಯಕ್ಷ ಹೆಚ್. ಹನುಮಂತಪ್ಪ ಕಾಂಗ್ರೆಸ್ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಬಗ್ಗೆ ಮೊದಲು ಧ್ವನಿ ಎತ್ತಿತ್ತು. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಂಡಿರುವ ಆಯೋಗವು ಪಟ್ಟಿ ಪರಿಷ್ಕರಿಸಿದ ಬಳಿಕ ಮತ್ತೆ ದೋಷಗಳು ಕಂಡು ಬಂದರೆ ಮನವಿ ಸಲ್ಲಿಸುವ ಅವಕಾಶ ನೀಡಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸದಾನಂದಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭೆಗೆ ಅವಧಿಗೆ ಮುನ್ನವೇ ಚುನಾವಣೆ ನಡೆಸುವಂತೆ ಮಾಡಿರುವ ಮನವಿಗೆ ಆಯುಕ್ತರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಮೇ ಒಳಗೆ ಚುನಾವಣೆ ನಡೆಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವರುಗಳಾದ ಡಿ.ಹೆಚ್. ಶಂಕರಮೂರ್ತಿ, ಡಾ. ವಿ.ಎಸ್. ಆಚಾರ್ಯ, ಕಟ್ಟಾ ಸುಬ್ರಮಣ್ಯನಾಯ್ಡು ನಾಗರಾಜಶೆಟ್ಟಿ ಮೊದಲಾದವರು ಬಿಜೆಪಿ ಪರವಾಗಿ ಆಯುಕ್ತರಿಗೆ ಮನವಿ ಸಲ್ಲಿಸಿದರೆ, ಕಾಂಗ್ರೆಸ್ ಪಕ್ಷದಿಂದ ಮುಖಂಡರಾದ ಬಿ.ಎಲ್. ಶಂಕರ್ ರಾಮಚಂದ್ರಪ್ಪ ಇವರುಗಳು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಮನವಿ ಸಲ್ಲಿಸಿದರು.
|