ಆಟೋದಲ್ಲಿ ಬಳಸುವ ಎಲ್ಪಿಜಿ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಆಟೋ ಮೀಟರ್ ದರವನ್ನು ಹೆಚ್ಚಿಸಬೇಕು ಎಂದು ಸಿಐಟಿಯುನ ಆಟೋ ರಿಕ್ಷಾ ಚಾಲಕರ ಒಕ್ಕೂಟ ಇಂದು ಮುಷ್ಕರ ನಡೆಸುತ್ತಿದ್ದು, ಕೆಲವು ಕಾರ್ಮಿಕ ಒಕ್ಕೂಟಗಳ ಬೆಂಬಲ ದೊರೆತಿಲ್ಲ.
ಈ ಹಿಂದೆ ನಿರ್ಧರಿಸಲಾದಂತೆ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದಲೇ ಆಟೋ ಮುಷ್ಕರಕ್ಕೆ ಚಾಲನೆ ದೊರೆತಿದೆ. ಅದನ್ನು ಅವಲಂಬಿಸಿದವರು ಪಡಿಪಾಟಲು ಪಡುವಂತಾಗಿದೆ. ಇಂದಿನ ಮುಷ್ಕರದಿಂದಾಗಿ ಪ್ರಯಾಣಿಕರಿಗಾಗುವ ತೊಂದರೆಯನ್ನು ನಿವಾರಿಸಲು ಮಹಾನಗರ ಸಾರಿಗೆ ಸಂಸ್ಥೆ ನಗರದ ವಿವಿಧ ಸ್ಥಳಗಳಲ್ಲಿ ಸುಮಾರು 300 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ.
ಈಗ ಕನಿಷ್ಠ ಮೀಟರ್ ದರ 12 ರೂಪಾಯಿಗಳಿದ್ದು ಇದನ್ನು 20 ರೂ.ಗಳಿಗೇರಿಸಬೇಕು ಹಾಗೂ ಪ್ರತಿ ಕಿ.ಮೀ.ದರವನ್ನು ರೂ.6ರಿಂದ 10ಕ್ಕೆ ಏರಿಸಬೇಕು ಎಂಬುದು ಒಕ್ಕೂಟದ ಬೇಡಿಕೆಯಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹೇಳಿದ್ದಾರೆ. ಆದರೆ ಹೀಗೆ ಮಾಡುವುದರಿಂದ ಪ್ರಯಾಣಿಕರು ಆಟೋವನ್ನು ಅವಲಂಬಿಸುವುದಿಲ್ಲ. ಇದರಿಂದ ಆಟೋದವರಿಗೆ ಇನ್ನೂ ತೊಂದರೆಯೇ ಹೆಚ್ಚು ಎಂಬುದು ಇತರ ಒಕ್ಕೂಟಗಳ ಅಭಿಪ್ರಾಯ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಆಟೋ ಚಾಲಕರ ಒಕ್ಕೂಟ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಇವೇ ಮೊದಲಾದ ಸಂಘಟನೆಗಳು ಸಿಐಟಿಯು ವತಿಯಿಂದ ನಡೆಸಲಾಗುತ್ತಿರುವ ಇಂದಿನ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿವೆ.
|