ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದ ನೆನಪುಗಳು ಇನ್ನೂ ಹಸಿ ಹಸಿಯಾಗಿರುವಾಗಲೇ ಮತ್ತೊಂದು ಸಮಾವೇಶಕ್ಕೆ ಮೈದಾನ ಸಿದ್ಧಗೊಂಡಿದ್ದು, ಇಂದು ಇಲ್ಲಿ ಜೆಡಿಎಸ್ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ ನಡೆಯಲಿದೆ.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಭೆಯ ನೇತೃತ್ವ ವಹಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ವಹಿಸುವ ನಿರ್ಧಾರವನ್ನು ಈಗಾಗಲೇ ತಳೆಯಲಾಗಿದೆ. ಆದರೆ ಚುನಾವಣೆಗಳನ್ನು ಎದುರಿಸಲು ಯಾವ ಕಾರ್ಯತಂತ್ರವನ್ನು ಅನುಸರಿಸಬೇಕು ಎಂಬ ಅಂಶ ಇಂದಿನ ಸಭೆಯಲ್ಲಿ ಚರ್ಚೆಗೆ ಬರುವ ನೀರೀಕ್ಷೆ ಇದೆ.
ಮೇ ಅಂತ್ಯದ ವೇಳೆಗೆ ಚುನಾವಣೆ ನಡೆಯಲಿ ಎಂದು ದೇವೇಗೌಡರು ರಾಜ್ಯಪಾಲರೊಂದಿಗಿನ ತಮ್ಮ ಇತ್ತೀಚಿನ ಭೇಟಿಯಲ್ಲಿ ಒತ್ತಾಯಿಸಿದ್ದಾರಾದರೂ ಅದಕ್ಕೆ ಬೇಕಾದ ಕಾರ್ಯಸಿದ್ಧತೆಗಳು, ರಣತಂತ್ರಗಳು, ಪ್ರಚಾರ ವೈಖರಿ ಇತ್ಯಾದಿ ವಿಷಯಗಳ ಬಗೆಗೆ ಚರ್ಚೆ ನಡೆಸುವುದು ಅಗತ್ಯವಿದೆ. ಜೊತೆಗೆ ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂದು ಎಷ್ಟೇ ಹೇಳಿಕೊಂಡರೂ ಮಹಿಳೆಯರಿಗೆ ಪಕ್ಷದಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಜೆಡಿಎಸ್ ಮಹಿಳಾ ಮುಖಂಡರು ಗೌಡರ ಮೇಲೆ ನೇರವಾಗಿ ಹರಿಹಾಯ್ದಿರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಗೌಡರ ಇತ್ತೀಚಿನ ಅನಿವಾರ್ಯ ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಪದಾಧಿಕಾರಿಗಳ ಸಭೆ ಹೊರಡಿಸುವ ತೀರ್ಮಾನಗಳ ಬಗ್ಗೆ ಎಲ್ಲರ ಗಮನ ಹರಿದಿದೆ.
ಚುನಾವಣೆ ಎದುರಿಸಲು ತಮ್ಮ ಪಕ್ಷಕ್ಕೆ ಕುಮಾರಸ್ವಾಮಿಯವರ ಸರ್ಕಾರದ ಸಾಧನೆ ಹಾಗೂ ಅವರ ವೈಯಕ್ತಿಕ ವರ್ಚಸ್ಸು ಸಾಕು. ಬೇರೆ ರಾಜಕೀಯ ಪಕ್ಷಗಳನ್ನು ಹೀಗಳೆಯುವ ಇಲ್ಲವೇ ಟೀಕಿಸುವ ಗೋಜಿಗೆ ನಾವು ಹೋಗುವುದಿಲ್ಲ ಎಂದು ಜೆಡಿಎಸ್ ವಕ್ತಾರ ವೈಎಸ್ವಿ ದತ್ತಾ ಈಗಾಗಲೇ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಗೌಡರ ಕಾರ್ಯತಂತ್ರ ಏನಿರಬಹುದು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.
|