ಇನ್ಪೋಸಿಸ್ ಸೇರಿದಂತೆ ಹಲವು ಸಾಫ್ಟ್‌ವೇರ್ ಕಂಪನಿಗಳನ್ನು ಸ್ಪೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬನನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಎಂಬ ಈ ವ್ಯಕ್ತಿ ಚೆನ್ನೈ ಮೂಲದವನಾಗಿದ್ದು ಕಳೆದ ನಾಲ್ಕೈದು ತಿಂಗಳಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ. ಹಲವಾರು ಕಂಪನಿಗಳಲ್ಲಿ ಕಾರ್ಯನಿರ್ವಹಿಸಿರುವ ಈತ ಸದ್ಯಕ್ಕೆ ನಿರುದ್ಯೋಗಿಯಾಗಿದ್ದು, ಚೆನ್ನೈನಲ್ಲಿ ಬಂಧನವಾದ ನಂತರ ಈಗ ಪೊಲೀಸರ ಕಸ್ಟಡಿಯಲ್ಲಿದ್ದಾನೆ.
ಸಾಫ್ಟ್‌ವೇರ್ ಕಂಪನಿಗಳಲ್ಲಿ ಆತ ಹೀಗೆ ಅಭದ್ರತೆಯ ಪರಿಸ್ಥಿತಿ ಉಂಟುಮಾಡಲು ಕಾರಣವೇನು? ಆತನಿಗೆ ಭಯೋತ್ಪದಕರ ಸಂಪರ್ಕವೇನಾದರೂ ಇದೆಯೇ? ಅಥವಾ ಮಾನಸಿಕ ಅಸ್ವಸ್ಥನೇ? ಎಂಬ ವಿಷಯಗಳು ಪೊಲೀಸರ ವಿಚಾರಣೆಯ ನಂತರವಷ್ಟೇ ಹೊರಬೀಳಬೇಕಿದೆ.
ಸತೀಶ್ ಕಳಿಸಿದ ಇ-ಮೇಲ್‌ಗಳ ಪ್ರತಿಯನ್ನು ಪಡೆದ ಪೊಲೀಸರು ಅದರ ಆಧಾರದ ಮೇಲೆ ಆತನನ್ನು ಸೆರೆಹಿಡಿದಿದ್ದು ಈಗ ತನಿಖೆಯನ್ನು ನಡೆಸುತ್ತಿದ್ದಾರೆ. ಇಂದು ಸಂಜೆ ಇವನನ್ನು ಮ್ಯಾಜಿಸ್ಟ್ತ್ರೇಟ್ ಮುಂದೆ ಹಾಜರುಪಡಿಸಲಿದ್ದು ತದನಂತರ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಅವನನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
|