ತಾವು ಬೆಳೆದ ಕಬ್ಬಿಗೆ ಸೂಕ್ತ ಬೆಲೆ ನೀಡಬೇಕೆಂದು ಒತ್ತಾಯಿಸಿದ ರೈತರು ರಾಜಭವನಕ್ಕೆ ಮುತ್ತಿಗೆ ಹಾಕುವ ಪ್ರಯತ್ನವನ್ನಿಂದು ನಡೆಸಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು 8000 ಮಂದಿ ರೈತರು ರಸ್ತೆ ತಡೆ ನಡೆಸಿದ್ದಲ್ಲದೆ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಘೋಷಣೆ ಕೂಗಿದರು.
ಪ್ರತಿ ಟನ್‌ಗೆ 1100 ರೂ.ನಂತೆ ದರ ನಿಗದಿಪಡಿಸಬೇಕು ಹಾಗೂ ನೀರಾವರಿ ಪಂಪ್‌ಯೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಸಬೇಕು ಎಂಬುದು ಈ ರೈತರ ಬೇಡಿಕೆಯಾಗಿದ್ದು, ಬೇಡಿಕೆಯೊಂದಿಗೆ ರಾಜಭವನಕ್ಕೆ ಮುತ್ತಿಗೆ ಹಾಕುವ ಪ್ರಯತ್ನವನ್ನು ಪೊಲೀಸರು ಸನಿಹದಲ್ಲಿಯೇ ತಡೆಯುವಲ್ಲಿ ಯಶಸ್ವಿಯಾದರು.
ಈ ಹಿಂದೆ ತಾವು ಮಾಡಿದ ಮನವಿಗೆ ರಾಜ್ಯಪಾಲರಿಂದ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ. ತಾವು ಬೆಳೆದ ವಾಣಿಜ್ಯ ಬೆಳೆಗಳೆಡೆಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಕಷ್ಟಪಟ್ಟು ಬೆಳೆದದ್ದಕ್ಕೆ ಬೆಲೆ-ಬೇಡಿಕೆ ಎರಡೂ ದೊರೆಯುತ್ತಿಲ್ಲ ಎಂದು ವಿಷಾದಿಸಿದ ರೈತರು, ತಾವಿರುವ ಸ್ಥಳಕ್ಕೇ ರಾಜ್ಯಪಾಲರು ಬಂದು ಬೇಡಿಕೆಯನ್ನು ಆಲಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ರೈತರಿಗೆ ಸಾಲಕೊಟ್ಟ ಖಾಸಗಿ ಬ್ಯಾಂಕುಗಳು ದಬ್ಬಾಳಿಕೆಯಿಂದ ಅದನ್ನು ವಸೂಲು ಮಾಡುವ ಪ್ರಯತ್ನಗಳಿಗೆ ಮುಂದಾಗುತ್ತಿವೆ. ಇದರಿಂದಾಗಿ ರೈತರು ಆತ್ಮಹತ್ಯೆಗೆ ಶರಣಾಗಬೇಕಾಗಿ ಬಂದಿದೆ. ಪ್ರತಿ ಟನ್ ಕಬ್ಬಿಗೆ 1100 ರೂ.ಗಳನ್ನು ನಿಗದಿಪಡಿಸುವುದರ ಜೊತೆಗೆ ಪ್ರತಿ ವರ್ಷವೂ ಟನ್‌ಗೆ 100 ರೂ.ನಂತೆ ಹೆಚ್ಚಿಸುತ್ತಾ ಹೋಗಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ರೈತರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
|