ಜೆಡಿಎಸ್ ಪಕ್ಷವನ್ನು ನಿರ್ಮೂಲನ ಮಾಡಬೇಕೆಂದು ಹಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ, ಜೆಡಿಎಸ್ ನಿರ್ನಾಮ ಸಾಧ್ಯವಿಲ್ಲ ಎಂಬುದನ್ನು ಅವರು ಅರಿತರೆ ಒಳ್ಳೆಯದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಪೂರ್ವ ನಿರ್ಧಾರದಂತೆ ಬೆಳಗ್ಗೆ 11ಕ್ಕೇ ಸಭೆ ಆರಂಭವಾಗಬೇಕಿತ್ತು. ಅದರೆ ರಾಹುಕಾಲ ಕಳೆದರೂ ಗೌಡರ ಆಗಮನವಾಗದಿದ್ದಾಗ ಕೆಲ ಕಾಲ ಅಲ್ಲಿ ಗುಜುಗುಜು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೂ ಗೌಡರು ತಡವಾಗಿ ಆಗಮಿಸಿದರು.
ಭಾಷಣಕ್ಕೆ ನಿಂತಾಗ ತಮ್ಮ ಎಂದಿನ ವ್ಯಂಗ್ಯಭರಿತ ಶೈಲಿಯಲ್ಲಿ ಮಾತುಗಳನ್ನು ಆಡಿದ ಗೌಡರು ಆಗಾಗ್ಗೆ ಕೆಲವೊಂದು ವಿಷಯಗಳ ಕುರಿತು ಸ್ಪಷ್ಟನೆಯನ್ನೂ ನೀಡಲು ಯತ್ನಿಸುತ್ತಿದ್ದರು. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ, ಜನಾಂದೋಲನ ಮತ್ತು ಜನಜಾಗೃತಿ ಹೆಸರಿನ ಯಾತ್ರೆಗಳನ್ನು ನಡೆಸಿವೆ. ಈ ಹಿನ್ನೆಲೆಯಲ್ಲಿ ಆ ಪಕ್ಷಗಳ ಮುಖಂಡರು ಜೆಡಿಎಸ್ ಬಗ್ಗೆ ಮಾಡುತ್ತಿರುವ ಆರೋಪಗಳ ಕುರಿತು ತಲೆ ಕೆಡಿಸಿಕೊಳ್ಳದೆ ಒಗ್ಗಟ್ಟಾಗಿ ಕೆಲಸಮಾಡಿ ಎಂದು ಗೌಡರು ಎಲ್ಲರಲ್ಲಿಯೂ ಕೇಳಿಕೊಂಡರು.
ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಸೇರಿದಂತೆ ಪಕ್ಷದ ಹಲವು ಮುಖಂಡರು, ಮಾಜಿ ಶಾಸಕರು, ಸಂಸದರು, ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಫೆಬ್ರವರಿ 19ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಅದಾದ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ವಿಧ್ಯುಕ್ತವಾಗಿ ಚುನಾವಣಾ ಪ್ರಚಾರದ ಸಾರಥ್ಯ ವಹಿಸುವ ಕುರಿತು ಒಮ್ಮತದ ತೀರ್ಮಾನ ಸಭೆಯಲ್ಲಿ ಹೊರಹೊಮ್ಮಿದೆ.
|