ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ನೂತನ ಕಾರ್ಯಾಧ್ಯಕ್ಷರಾಗಿ ಮಾಜಿ ಸಂಸದ ಸಿ. ನಾರಾಯಣ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ವಿಧಾನಸಭಾ ಚುನಾವಣೆಗೆ ಪೂರ್ವ ತಯಾರಿಯಾಗಿ ಜನವರಿ 18ರಿಂದ ಫೆಬ್ರವರಿ 15ರವರೆಗೆ ಜೆಡಿಎಸ್ ನಾಯಕರು ರಾಜ್ಯಾದ್ಯಂತ ಪ್ರವಾಸ ನಡೆಸಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದರ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ನಾರಾಯಣ ಸ್ವಾಮಿಯವರ ನೇಮಕಾತಿಯ ನಿರ್ಧಾರ ಪ್ರಕಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಜೆಡಿಎಸ್ ಯಾವುದೇ ಜಾತಿ ಮತಗಳಿಗೆ ಸೇರಿದ್ದಲ್ಲ. ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಲ್ಲಿ ಎಲ್ಲ ಸಮುದಾಯದವರಿಗೂ ಸ್ಥಾನ ನೀಡಲಾಗಿದೆ ಎಂದು ಹೇಳಿದರು.
ಎಂದಿನಂತೆ ಬಿಜೆಪಿ ಮೇಲೆ ವಾಗ್ದಾಳಿ ಮುಂದುವರೆಸಿದ ಅವರು, ಬಿಜೆಪಿ ಕೊಟ್ಟ ಮಾತಿನಂತೆ ಪಿತೃ ಪಕ್ಷ ಮುಗಿದ ಮೇಲೆ ಅಧಿಕಾರ ಹಸ್ತಾಂತರಿಸಲು ನಿರ್ಧರಿಸಿದ್ದೆವು. ಆದರೆ ಆತುರ ತೋರಿ ಹಸ್ತಾಂತರ ಮಾಡಲೇಬೇಕು ಎಂದು ಪಟ್ಟು ಹಿಡಿದು ಕೆಟ್ಟ ವಾತಾವರಣವನ್ನು ಅವರೇ ಸೃಷ್ಟಿಸಿದರು ಮತ್ತು ಜನರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡಿದರು ಎಂದರು.
ಅಲ್ಲದೆ, ಯಡಿಯೂರಪ್ಪನವರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಆಗಮಿಸಿದ್ದ ನರೇಂದ್ರ ಮೋದಿ, ಗುಜರಾತ್ ಮಾದರಿಯಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಪಡಿಸುವಂತೆ ಹೇಳಿದ್ದರು. ಅದಕ್ಕೆ ಯಡಿಯೂರಪ್ಪನವರು ಒಪ್ಪಿದ್ದರು. ಇದರಿಂದ ಗೋದ್ರಾ ಮಾದರಿಯಂತೆ ಕರ್ನಾಟಕದಲ್ಲೂ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಎಲ್ಲರೂ ಭಾವಿಸುವ ಸನ್ನಿವೇಶಕ್ಕೆ ಅದು ಕಾರಣವಾಯಿತು ಎಂದು ಅವರು ಹೇಳಿದರು.
|