ದೇಶವನ್ನು ಹಿಂದುತ್ವದ ಕಡೆಗೆ ಕೊಂಡೊಯ್ಯಬೇಕೆನ್ನುವ ಬಿಜೆಪಿ ತಂತ್ರ ಫಲಿಸದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ 146ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಹಿಂದುತ್ವದ ಹೆಸರಿನಲ್ಲಿ ದೇಶವನ್ನು ನಾಶ ಮಾಡಲು ಸಾಧ್ಯವಿಲ್ಲ. ಈ ತತ್ವವನ್ನು ಮುಂದಿಟ್ಟುಕೊಂಡು ದೇಶವನ್ನು ಕಟ್ಟಲು ಬಿಜೆಪಿಗೆ ಸಾಧ್ಯವಿಲ್ಲ. ದೇಶದಲ್ಲಿ ಎಲ್ಲಾ ಜಾತಿಯ ಜನರಿರುವುದನ್ನು ಬಿಜೆಪಿ ಮರೆಯಬಾರದು ಎಂದು ತಿಳಿಸಿದರು.
ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ತಾವು ಸಿದ್ದಪಡಿಸಿದ್ದ 10 ಸೂತ್ರಗಳಿಗೆ ಸಹಿ ಹಾಕಿದ್ದರೆ ಇಷ್ಟು ಹೊತ್ತಿಗೆ ಆನಂದವಾಗಿ ರಾಜ್ಯವನ್ನು ಆಳಬಹುದಿತ್ತು. ದೇವರೇ ಅಧಿಕಾರ ಅವರ ಕೈಗೆ ಹೋಗದಂತೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ಇನ್ನು 5-6 ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕಿದೆ. ಎಲ್ಲರೂ ಒಗ್ಗಟ್ಟಾಗಿ, ಒಂದಾಗಿ ಪಕ್ಷವನ್ನು ಸಂಘಟಿಸಿ ಮುಂದಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಯುವ ಜನತಾದಳ ಹೊರತಂದಿರುವ ಪಾಕೆಟ್ ಕ್ಯಾಲೆಂಡರನ್ನು ಇದೇ ಸಂದರ್ಭದಲ್ಲಿ ದೇವೇಗೌಡರು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್, ಕಾರ್ಯಾಧ್ಯಕ್ಷ ಸಿ. ನಾರಾಯಣ ಸ್ವಾಮಿ, ಮುಖಂಡರುಗಳಾದ ಡಿ. ಮಂಜುನಾಥ್, ಪಿ.ಸಿ. ಸಿದ್ದನಗೌಡರ್ ಮೊದಲಾದವರು ಉಪಸ್ಥಿತರಿದ್ದರು.
|