ಜನರಲ್ಲಿ ಕಾನೂನಿನ ಕುರಿತಾಗಿ ಅರಿವು ಮೂಡಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ನಡೆಸುವುದಾಗಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದ್ದಾರೆ.
ಬೆಂಗಳೂರು ವರದಿಗಾರರ ಕೂಟ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರ್ಹ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ಮತ್ತು ಸಲಹೆ ನೀಡುವುದು, ನೊಂದ ಜನರಿಗೆ ಕಡಿಮೆ ಖರ್ಚಿನಲ್ಲಿ ತ್ವರಿತವಾಗಿ ನ್ಯಾಯ ದೊರಕಿಸಿ ಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಮಾರ್ಚ್ 2ನೇ ವಾರದಿಂದ ಆರಂಭವಾಗುವ ಈ ಕಾರ್ಯಕ್ರಮ 81 ದಿನಗಳ ಕಾಲ ನಡೆಯಲಿದ್ದು, ಸಾಕ್ಷರತಾ ಕಾರ್ಯಕ್ರಮ ನಡೆಯುವ ಕೇಂದ್ರಗಳಿಗೆ 15 ದಿನ ಮುಂಚಿತವಾಗಿ ಮಾಹಿತಿ ನೀಡಿ ಜನಜಾಗೃತಿಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದ ಮಹಿಳಾ ಸಂಘಟನೆ, ಸ್ತ್ತ್ರೀಶಕ್ತಿ ಸಂಘಗಳು ಸೇರಿದಂತೆ ಇತರ ಸಂಘಟನೆಗಳೊಡನೆ ಸಮನ್ವಯ ಸಾಧಿಸಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ ಗೋಪಾಲಗೌಡರು, ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆ, ನೈರ್ಮಲ್ಯ ಸಂಬಂಧಿ ಸಮಸ್ಯೆಗಳ ಕುರಿತು ಸೌಲಭ್ಯ ಪಡೆಯಲು ಇರುವ ಹಕ್ಕಿನ ಬಗ್ಗೆ ಈ ಕಾರ್ಯಕ್ರಮದಲ್ಲಿ ಜನಜಾಗೃತಿಗೊಳಿಸುವುದಾಗಿಯೂ ತಿಳಿಸಿದರು.
|