ಉನ್ನತ ಶಿಕ್ಷಣವನ್ನು ಒದಗಿಸುತ್ತಿರುವ ಸಂಸ್ಥೆಗಳು ಕೆಲವೇ ವಿಷಯಗಳಿವೆ ಮಾತ್ರ ಮಹತ್ವ ಕೊಡುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಉಪರಾಷ್ಟ್ರಪತಿ ಮೊಹಮದ್ ಹಮೀದ್ ಅನ್ಸಾರಿ ತಿಳಿಸಿದ್ದಾರೆ.
ಭಾರತೀಯ ವಿಜ್ಞಾನ ಮಂದಿರದ ಆವರಣದಲ್ಲಿ ರಾಷ್ಟ್ರೀಯ ಉನ್ನತ ಅಧ್ಯಯನ ಕೇಂದ್ರದ ಅಧ್ಯಯನ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಅಧ್ಯಯನ ಸಂಸ್ಥೆಗಳು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ ಶಿಕ್ಷಣದ ಇತರೆ ವಿಭಾಗಗಳು ಹಿಂದೆ ಸರಿಯುತ್ತಿವೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ಅಧ್ಯಯನ ಸಂಸ್ಥೆ ಮಾದರಿಯಾಗಿದೆ ಎಂದು ತಿಳಿಸಿದರು.
ಇಂತಹ ಸಂಸ್ಥೆಗಳು ನಮ್ಮ ಬೌದ್ಧಿಕ ಉನ್ನತಿಗೆ ಉತ್ತಮ ಕೊಡುಗೆ ನೀಡುತ್ತಿದೆ. ಅಲ್ಲದೆ ಇದು ಕೇವಲ ಶುದ್ಧ ಸೈದ್ದಾಂತಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ನದಿ ವಿವಾದ, ಅಣ್ವಸ್ತ್ರ ನಿಷೇಧದಂತಹ ವಿಷಯಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಒಂದೇ ವೇದಿಕೆಗೆ ತಂದು ಚರ್ಚಿಸಿ ಚಿಂತನೆಗೆ ದಾರಿಯನ್ನು ಒದಗಿಸಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಮಾತನಾಡಿ, ಉನ್ನತ ಶಿಕ್ಷಣ ಸಂಸ್ಥೆಗಳು ಗಟ್ಟಿಯಾಗಿ ನೆಲೆಯೂರಬೇಕಿದ್ದರೆ ಹಾಗೂ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲು ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
|