ವಿಧಾನಸಭಾ ಚುನಾವಣೆಯು ಸಮೀಪಿಸುತ್ತಿರುವಂತೆ ವಿವಿಧ ಪಕ್ಷಗಳಲ್ಲಿ ರಾಜಕೀಯ ಕಸರತ್ತು ತೀವ್ರಗತಿಯಲ್ಲಿ ಪ್ರಾರಂಭವಾಗಿದೆ. ಪ್ರಸ್ತುತ ಜೆಡಿಎಸ್‌ನಿಂದ ಹೊರಬಂದಿರುವ ಎಂ.ಪಿ.ಪ್ರಕಾಶ್ ಬಣದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ತಮ್ಮ ಪಕ್ಷಕ್ಕೆ ಸ್ವಾಗತವಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಾಗಿಲನ್ನು ತೆರೆದಿದ್ದರೂ ಪ್ರಕಾಶ್ ಬಣ ಇನ್ನು ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ಈ ಮಧ್ಯೆ ಪ್ರಕಾಶ್ ಬಣದಲ್ಲಿ ಗುರುತಿಸಿಕೊಂಡ ನಾಯಕರಲ್ಲಿ ಕೆಲವರು ಕಾಂಗ್ರೆಸ್ ಸೇರುವ ಆಶಯ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಬಿಜೆಪಿಯತ್ತ ಒಲವು ತೋರಿಸಿದ್ದಾರೆ. ಆದರೆ ಪ್ರಕಾಶ್‌ರವರ ನಿರ್ಧಾರವೇ ಅಂತಿಮ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೆ ಬಿಜೆಪಿ ನಾಯಕರ ಜತೆಯಲ್ಲಿ ಮಾತುಕತೆ ನಡೆಸಿದ ಪ್ರಕಾಶ್ ಬಿಜೆಪಿ ಸೇರುತ್ತಾರೆಂಬ ಊಹಾಪೋಹ ಬಂದಿರುವ ಬೆನ್ನಲ್ಲೆ ಬಣದಲ್ಲಿ ಗುರುತಿಸಿಕೊಂಡಿರುವ ಕುರುಗೋಡು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಬಳ್ಳಾರಿಯಲ್ಲಿನ ಬಿಜೆಪಿ ಘಟಕ ತೀವ್ರವಾಗಿ ವಿರೋಧಿಸಿದೆ.
ಬಳ್ಳಾರಿ ಬಿಜೆಪಿ ಘಟಕದ ಪ್ರಕಾರ ಜಿಲ್ಲೆಯಲ್ಲಿ ಪ್ರಕಾಶ್ ಮತ್ತು ಸಂತೋಷ್ ಲಾಡ್ ಅವರು ಪಕ್ಷ ಸೇರುವುದಕ್ಕೆ ತಮ್ಮ ಅಭ್ಯಂತರವೇನಿಲ್ಲ. ಆದರೆ ಯಾವುದೇ ಕಾರಣಕ್ಕೂ ರೆಡ್ಡಿ ಪಕ್ಷಕ್ಕೆ ಬರಬಾರದೆಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸೂರ್ಯನಾರಾಯಣ ರೆಡ್ಡಿ ಬಿಜೆಪಿ ಸೇರದಿರಲು ನಿರ್ಧರಿಸಿದ್ದಾರೆ. ಈ ಹಿಂದೆ ಗಣಿ ವ್ಯವಹಾರದಲ್ಲಿ ಸೂರ್ಯನಾರಾಯಣ ರೆಡ್ಡಿ ಹಾಗೂ ಜರ್ನಾರ್ದನ ರೆಡ್ಡಿ ನಡುವೆ ವೈರತ್ವ ಬೆಳೆದಿದ್ದ ಘಟನೆ ಎಲ್ಲರಿಗೂ ತಿಳಿದಿದ್ದೆ.
|