ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದಾರೆ. ರೈಲ್ವೆ ನೀತಿಯನ್ನು ವಿರೋಧಿಸಿ ಕರವೇ ಕಾರ್ಯಕರ್ತರು ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ನೈಋತ್ವ ರೈಲ್ವೆ ಇಲಾಖೆಯ ಡಿ ಗ್ರೂಪ್ ಹುದ್ದೆಗಳಲ್ಲಿ ಬಿಹಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಕರವೇ ಕಾರ್ಯಕರ್ತರು ಇಲಾಖೆಯ ಪರೀಕ್ಷೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ರೈಲ್ವೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತು.
ಇದಕ್ಕೂ ಜಗ್ಗದ ಕಾರ್ಯಕರ್ತರು ನೇಮಕಾತಿ ಪ್ರಕ್ರಿಯೆ ಸಂಪೂರ್ಣ ನಿಲ್ಲಿಸಬೇಕೆಂದೂ, ಈ ಹುದ್ದೆಗಳಿಗೆ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂಬ ಒತ್ತಾಯವನ್ನು ಮಂಡಿಸಿದ್ದಾರೆ. ಈ ಮನವಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟವನ್ನು ಮಾಡುವುದಾಗಿ ಕರವೇ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ದಾವಣಗೆರೆ, ಹಾಸನ, ತುಮಕೂರು, ಧಾರವಾಡ ಸೇರಿದಂತೆ ರಾಜ್ಯವ್ಯಾಪಿ ಕರವೇ ಕಾರ್ಯಕರ್ತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಈ ಮಧ್ಯೆ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿ ರಾಜ್ಯ ರಾಜಕೀಯ ಪಕ್ಷಗಳು ಬೆಂಬಲ ನೀಡಿದೆ. ಈ ಸಂಬಂಧ ರಾಜ್ಯ ಬಿಜೆಪಿ ಸಂಸದರ ನಿಯೋಗವು ಈ ತಿಂಗಳ 25ರಂದು ದೆಹಲಿಗೆ ತೆರಳಿಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
|