ಉಡುಪಿ ಪರ್ಯಾಯ ವಿವಾದ ದಿನದಿನಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಮಠದಲ್ಲಿ ನಡೆದಿರುವ ವಿದ್ವಾಂಸರ ಎರಡು ದಿನದ ಸಭೆಯಲ್ಲಿ ಪುತ್ತಿಗೆ ಶ್ರೀಗಳಿಗೆ ಪೂಜೆಗೆ ಅವಕಾಶವಿಲ್ಲ ಎಂದು ಒಮ್ಮತ ನಿರ್ಧಾರವನ್ನು ಪ್ರಕಟಿಸಿರುವ ಬೆನ್ನಲ್ಲೆ ಪುತ್ತಿಗೆ ವಿರೋಧವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾ ಮಾಡಿ, ಪುತ್ತಿಗೆ ಶ್ರೀಗಳಿಗೆ ಕೃಷ್ಣಪೂಜೆಗೆ ಅವಕಾಶವನ್ನು ನ್ಯಾಯಾಲಯದ ನೀಡಿದೆ.
ಪುತ್ತಿಗೆ ಶ್ರೀಗಳು ವಿದೇಶ ಪ್ರವಾಸ ಮಾಡಿರುವುದರಿಂದ ಸಂಪ್ರದಾಯವನ್ನು ಮುರಿದಿದ್ದಾರೆ. ಆದ್ದರಿಂದ ಅವರಿಗೆ ಕೃಷ್ಣಪೂಜೆ ಮಾಡಲು ಅವಕಾಶ ನೀಡಬಾರದೆಂದು ಸ್ಥಳೀಯರಾದ ನಾಗರಾಜ ಮತ್ತು ಹರೀಶ್ ಭಟ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠವು ವಜಾ ಮಾಡಿದೆ. ಈ ಮೂಲಕ ಪುತ್ತಿಗೆ ಶ್ರೀಗಳ ಪರ್ಯಾಯ ಹಾದಿ ಸುಗುಮವಾದಂತಾಗಿದೆ.
ಪುತ್ತಿಗೆ ಶ್ರೀಗಳು ಶ್ರೀಕೃಷ್ಣಪೂಜೆಗೆ ಅರ್ಹರೇ ಎಂಬುದನ್ನು ತೀರ್ಮಾನಿಸಲು ಕರೆದಿದ್ದ ಮಾಧ್ವ ಸಂಪ್ರದಾಯದ ಮಠಾಧೀಶರು ಮತ್ತು ವಿದ್ವಾಂಸರು ಸೇರಿದ್ದ ಸಭೆಯಲ್ಲಿ ಪುತ್ತಿಗೆ ಶ್ರೀ ಸುಗುಣೇಂಧ್ರ ತೀರ್ಥರು ಪೂಜೆ ಮಾಡಬಾರದು ಮತ್ತು ಸರ್ವಜ್ಞ ಪೀಠವನ್ನು ಏರಬಾರದೆಂದು ತೀರ್ಮಾನಿಸಲಾಗಿತ್ತು. ಈ ಮನವಿಗೆ ಉತ್ತರ ನೀಡಲು ಜನವರಿ 15ರವರೆಗೆ ಪುತ್ತಿಗೆ ಶ್ರೀಗಳಿಗೆ ಗಡುವು ವಿಧಿಸಿತ್ತು.
ಈ ನಿರ್ಧಾರವನ್ನು ಸ್ವೀಕರಿಸದಿದ್ದರೆ ಈ ತಿಂಗಳ 15ರಿಂದ ನಿರಾಹಾರ ಉಪವಾಸ ಕೈಗೊಳ್ಳುವುದಾಗಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಘೋಷಿಸಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಪರ್ಯಾಯದ ವಿಚಾರ ಮಠಗಳ ಆಂತರಿಕ ವಿಷಯಕ್ಕೆ ಸಂಬಂಧಪಟ್ಟಿದೆ. ಸಾರ್ವಜನಿಕರು ಇದರಲ್ಲಿ ತೊಡಗಿಸಿಕೊಳ್ಳಲು ಅವಕಾಶವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿ ತನ್ನ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶ ಪುತ್ತಿಗೆ ಮಠಕ್ಕೆ ಪರವಾಗಿರುವ ಹಿನ್ನೆಲೆಯಲ್ಲಿ ಮಠದ ಚಟುವಟಿಕೆಗಳು ಚುರುಕುಗೊಂಡು ಉತ್ಸಾಹ ತುಂಬಿದ್ದನ್ನು ಉಡುಪಿಯಲ್ಲಿ ಕಾಣಬಹುದಿತ್ತು
|