ರಾಜ್ಯದ ರೈಲ್ವೆ ವಲಯದಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಬಿಹಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದ ಪ್ರಕ್ರಿಯೆಗೆ ಕಡಿವಾಣ ಹಾಕಲು ನಡೆಸಲಾಗುತ್ತಿರುವ ಹೋರಾಟ ನಿರಂತರವಾಗಿ ಸಾಗಿದೆ.
ಬೆಂಗಳೂರಿನ ದಂಡು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಲ್ಲಿರುವ ಆಯ್ಕೆ ಮಂಡಳಿ ಕಛೇರಿಯ ಪೀಠೋಪಕರಣಗಳನ್ನು ನಾಶಪಡಿಸಿದರು. ನಂತರ ಕಚೇರಿಗೆ ಬೀಗ ಜಡಿಯಲೆತ್ನಿಸಿದ ಮುನ್ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಇದಕ್ಕೂ ಮುನ್ನ ಮಾತನಾಡಿ ಘೋಷಣೆ ಕೂಗಿದ ಕಾರ್ಯಕರ್ತರು ಕನ್ನಡಿಗರಿಗೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.
ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಅನ್ಯಾಯವಾಗುತ್ತಿದ್ದರೂ ಏನೂ ಕ್ರಮ ತೆಗೆದುಕೊಳ್ಳದ ರಾಜ್ಯ ಸಂಸದರ ನಿಲುವನ್ನು ಖಂಡಿಸಿ ಮಾಜಿ ಶಾಸಕ ಕೆ.ಪ್ರಭಾಕರ ರೆಡ್ಡಿಯವರ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಕಾರ್ಯಕರ್ತರು ರೈಲ್ವೆ ಇಲಾಖೆಯವರ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿದರು.
|